ಜಯಾ ನಿಧನದ ಬಗ್ಗೆ ಕಡು ವಿರೋಧಿ ಕರುಣಾನಿಧಿ ಹೇಳಿದ್ದೇನು ?
ಚೆನ್ನೈ, ಡಿ.6: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಖ್ಯಾತಿ ಅಜರಾಮರವಾಗಿ ಉಳಿಯವುದು ಎಂದು ಅವರ ಕಡುವಿರೋಧಿ ಡಿಎಂಕೆ ಪಕ್ಷದ ಮುಖ್ಯಸ್ಥ ಕರುಣಾನಿಧಿ ತಮ್ಮ ಸಂತಾಪ ಸಂದೇಶದಲ್ಲಿಹೇಳಿದ್ದಾರೆ.
ಕರುಣಾನಿಧಿಯವರ ಸಂತಾಪ ಸಂದೇಶದಲ್ಲಿ ಹೀಗೆಂದು ಬರೆಯಲಾಗಿದೆ:
‘‘ಜಯಲಲಿತಾ ಚಿತ್ರತಾರೆಯಾಗಿ 120ಕ್ಕೂ ಹೆಚ್ಚು ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಖ್ಯಾತಿ ಗಳಿಸಿದ್ದರಲ್ಲದೆ ಅವರನ್ನು ರಾಜಕೀಯಕ್ಕೆ ನನ್ನ ಒಳ್ಳೆಯ ಸ್ನೇಹಿತ ಪುರಚ್ಚಿ ನಾಡಿಗರ್ ಎಂಜಿಆರ್ ಕರೆತಂದರು. ಆಕೆ ರಾಜ್ಯಸಭಾ ಸಂಸದೆಯಾಗಿದ್ದರು. ಎಂಜಿಆರ್ ನಿಧನಾನಂತರ ಆಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯಾದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಆಕೆ ಅಸೌಖ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದಾಗ ಆಕೆ ಗುಣಮುಖರಾಗಿಕೆಲವೇ ದಿನಗಳಲ್ಲಿ ಹಿಂದಿರುಗುವರೆಂದು ನಂಬಿದ್ದೆ. ವಿಶ್ವವಿಖ್ಯಾತ ವೈದ್ಯರ ಸರ್ವ ಪ್ರಯತ್ನಗಳ ಹೊರತಾಗಿಯೂ, ಪಕ್ಷ ನಾಯಕರ, ಕಾರ್ಯಕರ್ತರ, ಅಭಿಮಾನಿಗಳ ಪ್ರಾರ್ಥನೆಗಳ ಹೊರತಾಗಿಯೂ ಆಕೆವಿಧಿವಶರಾಗಿದ್ದಾರೆ.
ಪಕ್ಷಗಳ ವಿಚಾರ ಬಂದಾಗ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ಜಯಲಲಿತಾ ಧೈರ್ಯದಿಂದ ಪಕ್ಷದ ಶ್ರೇಯಸ್ಸಿಗೆ ಹೋರಾಡಿದ್ದರು. ಆಕೆ ಸಣ್ಣ ಪ್ರಾಯದಲ್ಲಿಯೇ ವಿಧಿವಶರಾದರೂ ಆಕೆಯ ಖ್ಯಾತಿ ಅಜರಾಮರವಾಗಿರುವುದು. ದುಃಖತಪ್ತರಾಗಿರುವ ಆಕೆಯ ಪಕ್ಷದ ನಾಯಕರು, ಲಕ್ಷೋಪಲಕ್ಷ ಕಾರ್ಯಕರ್ತರು ಹಾಗೂ ಸ್ನೇಹಿತರಿಗೆ ನನ್ನತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ’’.