ಜಯಲಲಿತಾ ನಿಧನ: ಎಐಎಡಿಎಂಕೆಯಲ್ಲಿ ಮತ್ತೊಂದು ಬಿಕ್ಕಟ್ಟು ಸೃಷ್ಟಿ
ಚೆನ್ನೈ, ಡಿ.6: ಮೂರು ದಶಕಗಳ ಬಳಿಕ ಎಐಎಡಿಎಂಕೆ ಮತ್ತೊಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಕ್ಷದ ಸಂಸ್ಥಾಪಕ ಎಂಜಿ ರಾಮಚಂದ್ರನ್(ಎಂಜಿಆರ್) ನಿಧನರಾದ ಸಂದರ್ಭದಲ್ಲಿ ಪಕ್ಷ ಮೊದಲ ಬಾರಿ ದೊಡ್ಡ ಸವಾಲು ಎದುರಿಸಿತ್ತು. ಇದೀಗ ಮತ್ತೊಂದು ಸವಾಲು ಎದುರಾಗಿದೆ.
ಪಕ್ಷವನ್ನು ಏಕಾಂಗಿಯಾಗಿ ಮುನ್ನಡೆಸುತ್ತಿದ್ದ 68ರ ಪ್ರಾಯದ ಜಯಲಲಿತಾ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ ಪರ್ಯಾಯವಾಗಿ ಯಾವ ನಾಯಕನೂ ಪಕ್ಷದಲ್ಲಿಲ್ಲ. ಎಲ್ಲರನ್ನು ಒಗ್ಗಟ್ಟಿನಿಂದ ಮುಂದಕ್ಕೆ ಕೊಂಡೊಯ್ಯುವ ಪರ್ಯಾಯ ನಾಯಕನ ಸಮಸ್ಯೆ ಪಕ್ಷ ಎದುರಿಸುತ್ತಿದೆ. ಏಳು ಬಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದ, ಪುರಚ್ಚಿ ತಲೈವಿ(ಕ್ರಾಂತಿಕಾರಿ ನಾಯಕಿ) ಎಂದೇ ಜನಪ್ರಿಯರಾಗಿದ್ದ ಜಯಲಲಿತಾ ಪಕ್ಷವನ್ನು ಹೊಸ ಎತ್ತರಕ್ಕೆ ಬೆಳೆಸಿದ್ದರು. ಕಳೆದ ಮೇನಲ್ಲಿ ಸತತ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿತ್ತು. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದ್ದ ಪಕ್ಷ ಇದೀಗ ನಾಯಕಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
‘‘ನಾವು ಅವರಲ್ಲಿ ಕ್ರಾಂತಿಕಾರಿ ನಾಯಕಿಯನ್ನು ಕಂಡಿದ್ದೆವು. ಅವರು ನಮ್ಮೆಲ್ಲರ ಅಮ್ಮ. ಅವರಿಗೆ ಪರ್ಯಾಯ ನಾಯಕರು ಯಾರೂ ಇಲ್ಲ’’ ಎಂದು ಅಲಂದೂರಿನ ಪಕ್ಷದ ಕಾರ್ಯಕರ್ತ ವಲ್ಲಿ ರಾಜು ಹೇಳಿದ್ದಾರೆ.
ಈ ಹಿಂದೆ ಎರಡು ಬಾರಿ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಒ. ಪನ್ನೀರ ಸೆಲ್ವಂ ಜಯಲಲಿತಾರ ನಾಯಕತ್ವಕ್ಕೆ ಯಾವುದೇ ರೀತಿಯಲ್ಲಿ ಸಾಟಿಯಾಗುತ್ತಿಲ್ಲ. ಮುಂಬರುವ ಸ್ಥಳೀಯ ಮಟ್ಟದ ಚುನಾವಣೆ ಆಡಳಿತ ಪಕ್ಷಕ್ಕೆ ಎದುರಾಗಿರುವ ತಕ್ಷಣದ ಅಗ್ನಿ ಪರೀಕ್ಷೆಯಾಗಿದೆ.
ಯಾರಾದರೊಬ್ಬರು ಮತ್ತೊಬ್ಬನನ್ನು ಹಣಿಯಲು ಹೊರಟರೆ ಪಕ್ಷದಲ್ಲಿ ಒಗ್ಗಟ್ಟು ಇರುವುದಿಲ್ಲ. ಎಂಜಿಆರ್ ನಿಧನರಾದ ಬಳಿಕ ಇಂತಹ ಪರಿಸ್ಥಿತಿ ಎದುರಾಗಿತ್ತು ಎಂದು ರಾಜಕೀಯ ವಿಶ್ಲೇಷಕ ಸತ್ಯಮೂರ್ತಿ ಅಭಿಪ್ರಾಯಪಟ್ಟರು.