ದುಬೈ ನ್ಯಾಯಾಲಯಕ್ಕೆ ಹಾಜರಾಗಲು ಸಾವಿರ ಕಿ.ಮೀ. ನಡೆದಿದ್ದ ವ್ಯಕ್ತಿ ಸುಷ್ಮಾರಿಂದಾಗಿ ತಾಯ್ನಾಡಿಗೆ ಮರಳಿದ

Update: 2016-12-06 08:53 GMT

ಹೊಸದಿಲ್ಲಿ,ಡಿ.6: ತಾಯ್ನಡಿಗೆ ಮರಳಲು ನ್ಯಾಯದೇವತೆಯ ನೆರವು ಕೋರಿ ಕಳೆದ ಎರಡು ವರ್ಷಗಳಲ್ಲಿ 20 ಬಾರಿ ದುಬೈ ನ್ಯಾಯಾಲಯಕ್ಕೆ ಹಾಜರಾಗಲು ಒಟ್ಟು 1,000 ಕಿ.ಮೀ.ದೂರವನ್ನು ನಡೆದುಕೊಂಡೇ ಕ್ರಮಿಸಿದ್ದ ತಮಿಳುನಾಡು ಮೂಲದ ಜಗನ್ನಾಥನ್ ಸೆಲ್ವರಾಜ್ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕಳೆದ ವಾರವಷ್ಟೇ ಟ್ವೀಟ್ ಮಾಡಿದ್ದರು. ಮೂತ್ರಪಿಂಡ ವೈಫಲ್ಯದಿಂದಾಗಿ ನ.7ರಿಂದ ಇಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಸುಷ್ಮಾರ ನೆರವಿನಿಂದಾಗಿ ಸೆಲ್ವರಾಜ್ ಇದೀಗ ತಮಿಳುನಾಡಿನಲ್ಲಿರುವ ತನ್ನ ಸ್ವಗ್ರಾಮಕ್ಕೆ ಮರಳಿದ್ದಾನೆ.

ದುಬೈನಲ್ಲಿ ನಿರುದ್ಯೋಗಿಯಾಗಿದ್ದು ಕಳೆದ ಎರಡು ವರ್ಷಗಳಿಂದಲೂ ತ್ರಿಶಂಕು ಸ್ಥಿತಿಯನ್ನು ಅನುಭವಿಸುತ್ತಿದ್ದ ಸೆಲ್ವರಾಜ್‌ಗೆ ಅಲ್ಲಿಯ ಪಾರ್ಕ್ ಆಶ್ರಯ ತಾಣವಾಗಿತ್ತು. ತಾಯ್ನಿಡಿಗೆ ಮರಳಲು ವಿಮಾನದ ಟಿಕೆಟ್‌ಗಾಗಿ ಅಲ್ಲಿಯ ನ್ಯಾಯಾಲಯಕ್ಕೆ ಮೊರೆಯಿಟ್ಟಿದ್ದ ಆತ ಕೈಯಲ್ಲಿ ಹಣವಿಲ್ಲದ್ದರಿಂದ 22.5 ಕಿ.ಮೀ. ದೂರವನ್ನು ನಡೆದುಕೊಂಡೇ ಕಲಾಪಗಳಿಗೆ ಹಾಜರಾಗುತ್ತಿದ್ದ. ಕಲಾಪದ ಬಳಿಕ ಪಾರ್ಕ್‌ಗೆ ವಾಪಸಾಗಲು ಮತ್ತೆ ಅಷ್ಟೇ ದೂರವನ್ನು ಕ್ರಮಿಸುತ್ತಿದ್ದ. ಹೀಗೆ 20 ಬಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಆತ ಒಟ್ಟೂ 1,000 ಕಿ.ಮೀ.ದೂರ ನಡೆದಿದ್ದ.

ಸೆಲ್ವರಾಜ್‌ನ ಕಥೆ ಕೇಳಿ ಮರುಗಿದ ಸುಷ್ಮಾ ಆಸ್ಪತ್ರೆಯಿಂದಲೇ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಈ ಬಗ್ಗೆ ವರದಿಯನ್ನು ಕೇಳಿದ್ದರು. ತಕ್ಷಣ ಚುರುಕಾದ ರಾಯಭಾರಿ ಕಚೇರಿ ಸೆಲ್ವರಾಜ್‌ನನ್ನು ತಾಯ್ನೆಡಿಗೆ ಕಳುಹಿಸಿದೆ. ಸೆಲ್ವರಾಜ್ ತನ್ನ ಸ್ವಗ್ರಾಮವನ್ನು ಸೇರಿದ್ದಾನೆಂದು ಸುಷ್ಮಾ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News