ಉ.ಪ್ರದೇಶ: ಬ್ಯಾಂಕಿನಲ್ಲಿ ಜನಿಸಿದ್ದ ಮಗು ಈಗ ‘ಖಜಾಂಚಿ ನಾಥ್’

Update: 2016-12-06 08:54 GMT

ಕಾನಪುರ,ಡಿ.6: ನೋಟು ನಿಷೇಧದ ಸಂಕಷ್ಟಗಳ ನಡುವೆಯೇ ಡಿ.2ರಂದು ಬ್ಯಾಂಕಿನಿಂದ ಹಣ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದ ತುಂಬು ಗರ್ಭಿಣಿ ಸರ್ವೇಶ ದೇವಿ ಅಲ್ಲಿಯೇ ತನ್ನ ಐದನೇ ಮಗುವಿಗೆ ಜನನ ನೀಡಿದ್ದಳು. ತಾಯಿ-ಮಗು ಈಗ ಚೆನ್ನಾಗಿದ್ದು, ನವಜಾತ ಶಿಶುವಿಗೆ ಖಜಾಂಚಿ ನಾಥ್ ಎಂದು ನಾಮಕರಣ ಮಾಡಿದ್ದಾಳೆ.

ಕಾನ್ಪುರ ಗ್ರಾಮೀಣ ಜಿಲ್ಲೆಯ ಸರದಾರಪುರ್ ಕೆ ಮಿರ್ಜಾ ನಿವಾಸಿಯಾದ ಸರ್ವೇಶ ದೇವಿ ಕೇಂದ್ರ ಸರಕಾರವು ನೋಟು ನಿಷೇಧ ಕ್ರಮವನ್ನು ಪ್ರಕಟಿಸಿದಾಗ ಹೆರಿಗೆಯ ದಿನವನ್ನು ಕಾಯುತ್ತಿದ್ದಳು. ಜಿಲ್ಲೆಯ ಝಿಂಜಕ್ ಪ್ರದೇಶದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಹಣವನ್ನು ಹಿಂಪಡೆಯಲೆಂದು ತೆರಳಿದ್ದ ಆಕೆ ಸರದಿ ಸಾಲಿನಲ್ಲಿ ಕಾಯುತ್ತಿರುವಾಗಲೇ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆ್ಯಂಬುಲನ್ಸ್‌ಗೆ ಕರೆ ಮಾಡಲಾಗಿತ್ತಾದರೂ ಅದು ಬರುವಷ್ಟರಲಿ ಆಕೆ ಮಗುವಿಗೆ ಜನನ ನೀಡಿದ್ದಳು. ಬ್ಯಾಂಕಿನಲ್ಲಿದ್ದ ಮಹಿಳಾ ಗ್ರಾಹಕರು ಆಕೆಯನ್ನು ಸುತ್ತುವರಿದು ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದರು. ಮಗು ನೋಟು ರದ್ದತಿಯ ಶಾಪದಿಂದ ಬದುಕುಳಿದಿದ್ದರಿಂದ ಆತನಿಗೆ ಖಜಾಂಚಿ ನಾಥ್ ಎಂದು ಹೆಸರಿಟ್ಟಿದ್ದೇವೆ ಎಂದು ಚಿಕ್ಕಪ್ಪ ಅನಿಲ್ ನಾಥ್ ಹೇಳಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News