ಕಮಲ್ ಹಾಸನ್ ವಿರುದ್ಧ ತಿರುಗಿದ ತಮಿಳರ ಆಕ್ರೋಶ

Update: 2016-12-06 11:04 GMT

ಹೊಸದಿಲ್ಲಿ,ಡಿ.6 : ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ಸುದ್ದಿ ಕಳೆದ ರಾತ್ರಿ ಹೊರಬೀಳುತ್ತಿದ್ದಂತೆಯೇ ಟ್ವಿಟ್ಟರಿನಲ್ಲಿ ಗಣ್ಯರ ಸಂತಾಪಗಳ ಮಹಾಪೂರವೇ ಹರಿದು ಬರುತ್ತಿದೆ. ಅಂತೆಯೇ ಖ್ಯಾತ ನಟ ಕಮಲ ಹಾಸನ್ ಕೂಡ ತಮ್ಮ ಸಂತಾಪ ಸೂಚಿಸಿ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅವರ ಸಂತಾಪ ಸಂದೇಶದಲ್ಲಿ ಏನೋ ಎಡವಟ್ಟಾಗಿತ್ತ್ತು. ‘‘ಜಯಲಲಿತಾ ಅವರನ್ನು ಅವಲಂಬಿಸಿದವರ ಬಗ್ಗೆ ನನ್ನ ತೀವ್ರ ಕನಿಕರವಿದೆ’’ ಎಂದು ಅವರು ಬರೆದಿದ್ದರು.ಅವರ ಈ ಟ್ವೀಟ್ ಸಹಜವಾಗಿ ತಮಿಳರ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವರು ತಮ್ಮ ಆಕ್ರೋಶವನ್ನು ಟ್ವೀಟುಗಳ ಮುಖಾಂತರ ಹರಿಯ ಬಿಟ್ಟಿದ್ದಾರೆ.

ಕಮಲ ಹಾಸನ್ ಅವರ ಚಿತ್ರ ‘ವಿಶ್ವರೂಪಂ’ ತಮಿಳುನಾಡಿನಲ್ಲಿ ನಿಷೇಧಿಸಲ್ಪಟ್ಟಿದ್ದಾಗ ಕಮಲ ಹಾಸನ್ ಹಾಗೂ ಜಯಲಲಿತಾ ನಡುವಿನ ಬಾಂಧವ್ಯದಲ್ಲಿ ಬಿರುಕು ಮೂಡಿತ್ತಲ್ಲದೆ ನಂತರ ಭಾಷಣವೊಂದರಲ್ಲಿ ತಾವು ತಮಿಳುನಾಡು ಹಾಗೂ ದೇಶವನ್ನೇ ಬಿಟ್ಟು ಹೋಗಬೇಕಾದೀತು ಹಾಗೂ ಕೊಳಕು ರಾಜಕೀಯದಾಟದಿಂದ ತಾನು ಬೇಸತ್ತಿದ್ದಾಗಿ ಭಾವಪರವಶರಾಗಿ ನುಡಿದಿದ್ದರು.

ಆದರೆ ಹಿಂದಿನ ಕಹಿ ಘಟನೆಯನ್ನು ಮರೆತು ಕಮಲ ಹಾಸನ್ ಅವರು ಚೆನ್ನೈನ ರಾಜಾಜಿ ಹಾಲ್ ಗೆ ಭೇಟಿ ನೀಡಿ ಜಯಲಲಿತಾ ಅವರಿಗೆ ಅಂತಿಮ ನಮನ ಸಲ್ಲಿಸುವರೇ ಅಥವಾ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.

ಜಯಲಲಿತಾ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಮರ್ಯಾದೆಗಳೊಂದಿಗೆ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಅವರ ಗುರು ಎಂಜಿಆರ್ ಅವರ ಸ್ಮಾರಕದ ಸಮೀಪವೇ ಇಂದು ಸಂಜೆ4.30 ಕ್ಕೆ ನೆರವೇರಲಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News