14,000 ಕೋ.ರೂ.ಕಪ್ಪುಹಣ ಘೋಷಿಸಿದ್ದ ಶಾ ಈಗ ವಿಚಾರಣಾಧಿಕಾರಿಗಳ ಎದುರು ತುಟಿ ಬಿಚ್ಚುತ್ತಿಲ್ಲ

Update: 2016-12-06 10:50 GMT

ಅಹ್ಮದಾಬಾದ್.ಡಿ.6: ಕಮಿಷನ್ ಆಸೆಗಾಗಿ ಪ್ರಭಾವಿ ವ್ಯಕ್ತಿಗಳದ್ದೆನ್ನಲಾಗಿರುವ 13,860 ಕೋ.ರೂ.ಗಳ ಬೃಹತ್ ಕಪ್ಪುಹಣವನ್ನು ಆದಾಯ ಬಹಿರಂಗ ಯೋಜನೆಯಡಿ ಘೋಷಿಸಿ ಪೇಚಿಗೆ ಸಿಲುಕಿರುವ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ ಶಾ ಈಗ ಆದಾಯ ತೆರಿಗೆ ಅಧಿಕಾರಿಗಳ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದ್ದಾನೆ. ಜಪ್ಪಯ್ಯ ಎಂದರೂ ಆತ ಬಾಯಿ ಬಿಡುತ್ತಿಲ್ಲ.

ಸೋಮವಾರ ಆರು ಗಂಟೆಗಳ ಕಾಲ ನಡೆಸಿದ ವಿಚಾರಣೆ ವೇಳೆ ಆತ ತ ದಿಗೆ ಸಹಕರಿಸಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 1,560 ಕೋ.ರೂ.ಗಳ ಮೊದಲ ಕಂತಿನ ತೆರಿಗೆ ತುಂಬುವ ಸಮಯ ಸನ್ನಿಹಿತವಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಶಾ ಸೋಮವಾರ ಟಿವಿ ಸ್ಟುಡಿಯೊವೊಂದರಲ್ಲಿ ದಿಢೀರ್ ಪ್ರತ್ಯಕ್ಷನಾದ ಬಳಿಕ ಯಾರ ಕಪ್ಪುಹಣವನ್ನು ಬಿಳಿ ಮಾಡಲು ತಾನು ಮುಂದಾಗಿದ್ದೆನೋ ಅವರ ಹೆಸರುಗಳನ್ನು ಬಹಿರಂಗಗೊಳಿಸುವುದಾಗಿ ಹೇಳಿದ್ದ.

ಉಪ ನಿರ್ದೇಶಕ(ತನಿಖೆ) ವಿನಯ್ ಕೌಶಲ್ ನೇತೃತ್ವದ ಆದಾಯ ತೆರಿಗೆ ಅಧಿಕಾರಿಗಳ ತಂಡವು ಶಾ ವಿಚಾರಣೆಯನ್ನು ದಾಖಲಿಸಿಕೊಂಡಿದೆ. ಆತ ತನಿಖೆಗೆ ಸಹಕರಿಸುತ್ತಿಲ್ಲ. ಮಾಹಿತಿಗಳನ್ನು ನೀಡಲು 2-3 ದಿನಗಳ ಸಮಯಾವಕಾಶ ಕೋರಿದ್ದಾನೆ. ಅಲ್ಲದೆ ತನ್ನ ಪತ್ನಿ ಅನಾರೋಗ್ಯಕ್ಕೆ ಗುರಿಯಾಗಿದ್ದಾಳೆ ಎಂದೂ ಹೇಳಿಕೊಂಡಿದ್ದಾನೆ. ಆತ ತನಿಖೆಗೆ ಸಹಕರಿಸದಿದ್ದರೆ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಹಾನಿರ್ದೇಶಕ(ತನಿಖೆ) ಪಿ.ಸಿ.ಮೋದಿ ತಿಳಿಸಿದರು. ತನಿಖೆಯ ವೇಳೆ ಹೃದ್ರೋಗಿಯಾಗಿರುವ ಶಾ ಹುಷಾರಿಲ್ಲ ಎಂದು ಹೇಳಿದ್ದರಿಂದ ಅಧಿಕಾರಿಗಳು ವೈದ್ಯರ ತಂಡವೊಂದನ್ನು ಕರೆಸಿದ್ದರು.

ಆದಾಯ ತೆರಿಗೆ ಇಲಾಖೆಯು 15 ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಗಳ ಸಂದರ್ಭ ವಶಪಡಿಸಿಕೊಂಡಿರುವ ದಾಖಲೆಗಳು ಈಗ ಕರ್ನಾಟಕಕ್ಕೆ ಸ್ಥಳಾಂತರ ಗೊಂಡಿರುವ ಗುಜರಾತಿನ ಓರ್ವ ರಾಜಕಾರಣಿ ಮತ್ತು ರಾಜಕೋಟ್‌ನ ಟ್ರಾವೆಲ್ ಉದ್ಯಮಿ ಜೊತೆಗೆ ಶಾ ನಿಕಟ ಸಂಬಂಧ ಹೊಂದಿದ್ದ ಎನ್ನುವುದನ್ನು ಬೆಟ್ಟುಮಾಡುತ್ತಿವೆ. ಶಾ ಘೋಷಿಸಿದ್ದ ಕಪ್ಪುಹಣ ಈ ವ್ಯಕ್ತಿಗಳಿಗೆ ಸೇರಿದ್ದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News