ಜಯಲಲಿತಾಗೆ ಮೋದಿ ಪುಷ್ಪಾಂಜಲಿ ಸಲ್ಲಿಕೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಒ.ಪನ್ನೀರ್ ಸೆಲ್ವಂ
ಚೆನ್ನೈ,ಡಿ.6: ಇಂದು ಮಧ್ಯಾಹ್ನ ಇಲ್ಲಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಅಂತಿಮ ನಮನಗಳನ್ನು ಸಲ್ಲಿಸಲು ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪಾರ್ಥಿವ ಶರೀರದ ಬಳಿ ತೆರಳುತ್ತಿದ್ದಂತೆ ತಡೆಯಲಾಗದ ದುಃಖದಿಂದ ಬಿಕ್ಕಿಬಿಕ್ಕಿ ಅಳುತ್ತಿದ್ದ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಭಾವೋದ್ವೇಗಗೊಂಡು ಎರಡು ಬಾರಿ ಪ್ರಧಾನಿಯನ್ನು ತಬ್ಬಿಕೊಂಡರು.
ಬಿಗುಭದ್ರತೆಯ ನಡುವೆ ಮೋದಿ ಅವರು ಜಯಲಲಿತಾರ ಪಾರ್ಥಿವ ಶರೀರ ವನ್ನಿರಿಸಿದ್ದ ರಾಜಾಜಿ ಹಾಲ್ ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದವರ ಶೋಕ ಕಟ್ಟೆಯೊಡೆದಿತ್ತು.
ಪಾರ್ಥಿವ ಶರೀರದ ಬಳಿ ಪುಷ್ಪಗುಚ್ಛವನ್ನಿರಿಸಿದ ಮೋದಿ ಅಂತಿಮ ನಮನ ಸಲ್ಲಿಸಿದ ಬಳಿಕ ಪನ್ನೀರ್ ಸೆಲ್ವಂ ಬಳಿ ನಡೆದರು. ಈ ವೇಳೆ ಭಾವೋದ್ವೇಗಗೊಂಡಿದ್ದ ಸೆಲ್ವಂ ಮೋದಿಯವರನ್ನು ಬಿಗಿಯಾಗಿ ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತರು. ಮೋದಿಯವರು ಧೈರ್ಯ ಕಳೆದುಕೊಳ್ಳಬೇಡಿ ಎನ್ನುವಂತೆ ಅವರ ಬೆನ್ನನ್ನು ಮೃದುವಾಗಿ ತಟ್ಟಿದರು.
ಮೋದಿಯವರು ತನ್ನ ವಾಹನದತ್ತ ಮರಳುತ್ತಿರುವಾಗ ಸೆಲ್ವಂ ರೋದಿಸುತ್ತಲೇ ಮತ್ತೆ ಅವರನ್ನು ಅಪ್ಪಿಕೊಂಡರು.
ಇದಕ್ಕೂ ಮುನ್ನ ಪ್ರಧಾನಿಯವರು ಉಕ್ಕಿಬರುತ್ತಿದ್ದ ದುಃಖವನ್ನು ತಡೆಯಲಾರದೆ ಭೋರಾಡಿ ಅಳುತ್ತಿದ್ದ ಜಯಲಲಿತಾರ ಆಪ್ತಗೆಳತಿ ಶಶಿಕಲಾ ನಟರಾಜನ್ ಬಳಿಗೆ ತೆರಳಿ ಅವರಿಗೆ ಸಮಾಧಾನ ಹೇಳಿದರು. ಈ ವೇಳೆಯೂ ಮತ್ತೆ ಅಳತೊಡಗಿದ್ದ ಸೆಲ್ವಂ ಮೋದಿಯವರನ್ನು ಗಟ್ಟಿಯಾಗಿ ತಬ್ಬಿಕೊಂಡರು. ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ ಎಂದು ಮೋದಿ ಹೇಳಿದರು.
ಬ್ಲಾಕ್ ಕ್ಯಾಟ್ ಕಮಾಂಡೊಗಳ ರಕ್ಷಣೆಯ ನಡುವೆ ಎರಡೂ ಕೈಗಳನ್ನೆತ್ತಿ ನಮಸ್ಕಾರ ಮಾಡುತ್ತ ಜನಸಂದಣಿಯ ನಡುವಿನಿಂದ ಸಾಗಿದ ಮೋದಿ ಈ ವೇಳೆ ಮೊಬೈಲ್‌ಗಳಿಂದ ತನ್ನ ಫೋಟೊ ಕ್ಲಿಕ್ಕಿಸದಂತೆ ಜನರನ್ನು ಕೋರಿಕೊಂಡರು.