ಶಿರಾಡಿ ಘಾಟ್‌ನ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ ಸಚಿವ ರೈ

Update: 2016-12-06 11:41 GMT

 ಮಂಗಳೂರು, ಡಿ.6: ಶಿರಾಡಿ ಘಾಟ್‌ನ 2ನೆ ಹಂತದ ಕಾಮಗಾರಿಯನ್ನು ಎಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಬಿಟ್ಟುಕೊಡಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ದ.ಕ.ಜಿಪಂ ಸಭಾಂಗಣದಲ್ಲಿ ನಡೆದ ದ.ಕ.ಜಿಲ್ಲೆಯ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿರಾಡಿ ಘಾಟ್‌ನ 2ನೆ ಹಂತದ ಗುಳಗಳಲೆಯಿಂದ ಮಾರನಹಳ್ಳಿಯವರೆಗಿನ ಡಾಮರೀಕರಣ ಮತ್ತು ಕೆಂಪುಹೊಳೆಯಿಂದ ಅಡ್ಡಹೊಳೆಯವರೆಗಿನ ರಿಜಿಡ್ ಪೇವ್‌ಮೆಂಟ್ ಕಾಮಗಾರಿಯಲ್ಲಿ 14 ಮೋರಿ ನಿರ್ಮಿಸಲು ಬಾಕಿ ಇದೆ. ಈ ಮಧ್ಯೆ ರಾ.ಹೆ.ಯ ಮುಖ್ಯ ಇಂಜಿನಿಯರ್ ಗುತ್ತಿಗೆದಾರನ ಜೊತೆ ಕಾಮಗಾರಿ ಪರಿಶೀಲಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿದ ಶೇ.50ರಷ್ಟು ಸಾಮಗ್ರಿಗಳು ಮತ್ತು ಯಂತ್ರೋಪಕರಣಗಳನ್ನು ಸಿದ್ಧಪಡಿಸಿಕೊಂಡ ಬಳಿಕ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದಾರೆ. ಇದರ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶವಿದೆ ಎಂದು ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.

 ಕಾಮಗಾರಿ ಪ್ರಾರಂಭಕ್ಕೆ ಮುನ್ನ ಇತರ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಶಿರಾಡಿ ಘಾಟನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಸೂಕ್ತ ಅಧಿಸೂಚನೆ ಹೊರಡಿಸಲು ಮುಖ್ಯ ಇಂಜಿನಿಯರ್ ಸೂಚಿಸಿದ್ದಾರೆ. ರಸ್ತೆಯ ಒಂದು ಬದಿಯಲ್ಲಿ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟರೆ ವಾಹನಗಳ ಸಂಚಲನದಿಂದ ಹಸಿ ಕಾಂಕ್ರೀಟ್ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಕಾಮಗಾರಿ ನಡೆಸಲು ಕಷ್ಟವಾಗುತ್ತದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕಾರ್ಯಪಾಲಕ ಅಭಿಯಂತರರು ಅಭಿಪ್ರಾಯಪಟ್ಟರು.

ಶಿರಾಡಿ ಘಾಟ್‌ನ ರಸ್ತೆ ಅಭಿವೃದ್ಧಿ ಕಾಮಗಾರಿಯು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಬಾಕಿಯುಳಿದ ಕಾಮಗಾರಿ ಶೀಘ್ರ ಆರಂಭಿಸಿ ಎಪ್ರಿಲ್‌ನಲ್ಲಿ ಪೂರ್ತಿಗೊಳಿಸಬೇಕು ಎಂದು ಸಚಿವ ರೈ ತಾಕೀತು ಮಾಡಿದರು.

ಮಂಗಳೂರಿಗೆ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ತುಂಬೆ ಬಳಿ ನಿರ್ಮಿಸಲಾಗುತ್ತಿರುವ ಕಿಂಡಿ ಅಣೆಕಟ್ಟನ್ನು 5 ಮೀಟರ್ ಎತ್ತರಕ್ಕೇರಿಸುವುದರಿಂದ ಹಲವರು ಭೂಮಿ ಕಳಕೊಳ್ಳಲಿದ್ದಾರೆ. ಆದರೆ ಕಂದಾಯ ಇಲಾಖೆಯು ಪೊಲೀಸ್ ಬಂದೋಬಸ್ತ್‌ನಲ್ಲಿ ಕೆಲವು ಮಂದಿಯನ್ನು ಸೇರಿಸಿ ಸಭೆ ನಡೆಸಿದ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಡಾ.ಜಗದೀಶ್,  ಅಣೆಕಟ್ಟಿಗೆ 5 ಮೀಟರ್ ಎತ್ತರಿಸುವುದರಿಂದ ಸುಮಾರು 30.68 ಎಕರೆ ಜಮೀನು ಮುಳುಗಡೆಯಾಗಲಿದೆ. ಆ ಪೈಕಿ 18 ಕುಟುಂಬಗಳ ಸುಮಾರು 18 ಎಕರೆ ಜಮೀನಿಗೆ ಪರಿಹಾರ ನೀಡಬೇಕಾಗಿದೆ. ಅದಕ್ಕಾಗಿ ಸರ್ವೇ ನಡೆಸಲು ಸೂಚಿಸಲಾಗಿತ್ತು. ಅದರಂತೆ ಜಮೀನು ಮುಳುಗಡೆಯಾಗುವ ಜಮೀನಿನ ರೈತ ಕುಟುಂಬವನ್ನಷ್ಟೇ ಸಭೆ ಕರೆದು ಅಹವಾಲು ಆಲಿಸಲಾಗಿದೆ. ಸಹಾಯಕ ಆಯುಕ್ತರ ನೇತೃತ್ವದಲ್ಲಿ ಕಂದಾಯ ಇಲಾಖೆಯು ಪೊಲೀಸ್ ಬಂದೋಬಸ್ತ್‌ನಲ್ಲಿ ಸಂತ್ರಸ್ತರ ಸಭೆ ನಡೆಸಿಲ್ಲ ಎಂದರು.

ಯೋಜನೆ ಅನುಷ್ಠಾನಗೊಳ್ಳುವ ಮುನ್ನವೇ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಬೇಕಿತ್ತು. ಈ ಮಧ್ಯೆ ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿ ಇಲಾಖೆ ನೀಡುವ ಮಾದರಿಯಲ್ಲೇ ಪರಿಹಾರ ನೀಡಲು ಈ ಕುಟುಂಬಗಳು ಬೇಡಿಕೆ ಮುಂದಿಟ್ಟಿವೆ. ಯೋಜನೆ ಪೂರ್ಣಗೊಳ್ಳಬೇಕಾದರೆ ಸಂತ್ರಸ್ತರ ಬೇಡಿಕೆಯನ್ನು ಪರಿಹರಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸ್ಥಳೀಯ ಶಾಸಕರ ಮತ್ತು ಅಧಿಕಾರಿಗಳ ಸಭೆಯನ್ನು ಕರೆಯಲಾಗುವುದು ಎಂದು ಸಚಿವ ರೈ ಹೇಳಿದರು.

ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಗಾಂಜಾ ಜಾಲ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರಗಿಸಬೇಕು ಎಂದು ಮಾಜಿ ಸಚಿವ ಹಾಗು ಶಾಸಕ ಅಭಯಚಂದ್ರ ಜೈನ್ ಹೇಳಿದರು.

 ಪುತ್ತೂರು ಮತ್ತು ಸುಳ್ಯ ತಾಲೂಕಿನ ನಾಲ್ಕು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಆಗಸ್ಟ್‌ನಲ್ಲಿ ಪೂರೈಕೆಯಾಗಬೇಕಾಗಿದ್ದ ಸಮವಸ್ತ್ರ ಇನ್ನೂ ವಿತರಣೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ ಎದ್ದುಕಾಣುತ್ತಿವೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಆರೋಪಿಸಿದರು.

ಈ ಬಗ್ಗೆ ಡಿಡಿಪಿಐ ನೀಡಿದ ಉತ್ತರದಿಂದ ಅಸಮಾಧಾನಗೊಂಡ ಸಚಿವ ರೈ, ಇದು ಕೆಡಿಪಿ ಸಭೆಯಲ್ಲಿ ಚರ್ಚೆಗೊಳಗಾಗಬಾರದಿತ್ತು. ವಾರದೊಳಗೆ ಸಮವಸ್ತ್ರ ವಿತರಿಸಿ ಎಂದು ಸೂಚಿಸಿದರು.

ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಮೊಯ್ದಿನ್ ಬಾವಾ ಚರ್ಚೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ನಾಮನಿರ್ದೇಶಿತ ಸದಸ್ಯರಾದ ಶ್ರೀನಿವಾಸ ಕಿಣಿ, ಹಾಜಿ ಜೆ. ಮುಹಮ್ಮದ್, ಪದ್ಮನಾಭ ನರಿಂಗಾನ, ಸತೀಶ್ ಕುಮಾರ್ ಉಪಸ್ಥಿತರಿದ್ದರು.

ಜಗತ್ತಿನಲ್ಲೇ ಇಲ್ಲದ ಟೋಲ್‌ಗೇಟ್‌ವೊಂದು ಬಿ.ಸಿ.ರೋಡ್‌ನಲ್ಲಿದೆ. ಇದನ್ನು ಸ್ಥಳಾಂತರಿಸಿ ಎಂದು ಸಾಕಷ್ಟು ಬಾರಿ ಸೂಚನೆ ನೀಡಿಯಾಗಿದೆ. ಸರ್ವಿಸ್ ರಸ್ತೆಯನ್ನೂ ಅಭಿವೃದ್ಧಿಪಡಿಸುವಂತೆ ತಿಳಿಸಲಾಗಿದೆ. ಇದನ್ನು ಇಲ್ಲಿಂದ ತೆರವುಗೊಳಿಸಿ ಅಪಾಯ ತಪ್ಪಿಸಿ ಎಂದು ಸಚಿವ ರೈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮರಳು ಚರ್ಚೆ 

ಜಿಲ್ಲೆಯ ಮರಳು ಕೇರಳಕ್ಕೂ, ಬೆಂಗಳೂರಿಗೆ ಸಾಗಾಟವಾಗುತ್ತಿವೆ. ಆದರೆ ಸ್ಥಳೀಯವಾಗಿ ಮರಳಿನ ಅಭಾವವಿದೆ. ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುತ್ತಾ ಬಡಪಾಯಿ ಕೂಲಿ ಕಾರ್ಮಿಕರನ್ನೂ ಬಂಧಿಸಲಾಗುತ್ತದೆ. ಇದು ಸರಿಯಲ್ಲ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಹೇಳಿದರು.

ಮರಳುಗಾರಿಕೆಗೆ ಸಂಬಂಧಿಸಿ 37 ಷರತ್ತುಗಳನ್ನು ವಿಧಿಸಲಾಗಿದೆ. ಅದಕ್ಕೆ ಒಪ್ಪಿಗೆ ನೀಡಿದ ಬಳಿಕವೇ ಪರ್ಮಿಟ್ ನೀಡಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿ ಈಗಾಗಲೆ 425 ಪರ್ಮಿಟ್ ಹಂಚಲಾಗಿದೆ. ನಾನ್‌ಸಿಆರ್‌ಝೆಡ್ ವಲಯದಲ್ಲಿ ಮರಳುಗಾರಿಕೆಗೆ 19 ಪ್ರದೇಶಗಳನ್ನು ಗುರುತಿಸಲಾಗಿದ್ದು, ಇನ್ನು 30 ದಕ್ಕೆಗಳನ್ನು ಗುರುತಿಸಲಾಗಿದೆ. ಷರತ್ತು ಉಲ್ಲಂಘಿಸಿ ಮರಳುಗಾರಿಕೆ ನಡೆಸುವವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕರಾವಳಿಗೆ ಪ್ರತ್ಯೇಕ ಮರಳು ನೀತಿ ರಚಿಸಲು ಉಪಸಮಿತಿ ರಚಿಸಲಾಗಿದೆ. ಸಮಿತಿಯ ಸಭೆಯನ್ನು ಶೀಘ್ರ ಕರೆದು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ರೈ ನುಡಿದರು.

ಕಾಮಗಾರಿಗೊಂಡ ರಸ್ತೆಯ ಭೂಪರಿವರ್ತನೆ:

ಸೀಮಂತೂರು ಗ್ರಾಮದಲ್ಲಿ 4 ಕೋ.ರೂ. ವೆಚ್ಚದಲ್ಲಿ ರಸ್ತೆಯೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಇದೀಗ ಆ ರಸ್ತೆಯು ಕೆಲವು ಭಾಗ ತನಗೆ ಸೇರುತ್ತದೆ ಎಂದು ಸ್ಥಳೀಯರೊಬ್ಬರು ತಗಾದೆ ತೆಗೆದಿದ್ದಾರೆ. ಅಷ್ಟೇ ಅಲ್ಲ, ಅದರ ಭೂಪರಿವರ್ತನೆ ಕೂಡ ಆಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ಸಭೆಯ ಗಮನ ಸೆಳೆದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ರೈ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಸಿ ಎಂದು ಸೂಚಿಸಿದರು.

94ಸಿಸಿಗೆ 3 ಸೆಂಟ್ಸ್:

ಜಿಲ್ಲೆಯಲ್ಲಿ 94ಸಿಗೆ 70,691 ಅರ್ಜಿಗಳು ಸಲ್ಲಿಕೆಯಾಗಿದೆ. ಆ ಪೈಕಿ 32,268 ಅರ್ಜಿಗಳು ವಿಲೇವಾರಿಯಾಗಿದ್ದು, ಉಳಿದ ಅರ್ಜಿಗಳ ವಿಲೇಗೆ ಕ್ರಮ ಜರಗಿಸಲಾಗುತ್ತದೆ. 94 ಸಿ ಮತ್ತು 94 ಸಿಸಿಯಲ್ಲಿ ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿದೆ. 94 ಸಿಸಿ ಅರ್ಜಿದಾರರಿಗೆ 3 ಸೆಂಟ್ಸ್ ಜಮೀನು ನೀಡಲು ಸಚಿವ ಸಂಪುಟ ತೀರ್ಮಾನಿಸಿದ್ದು, ಶೀಘ್ರ ಆದೇಶ ಹೊರಬೀಳಲಿದೆ ಎಂದು ಸಚಿವ ರೈ ಹೇಳಿದರು.

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News