ಜಯಲಲಿತಾರ ಪಾರ್ಥಿವ ಶರೀರವನ್ನು ಸುಡುವುದಿಲ್ಲ, ಸಮಾಧಿ ಮಾಡುತ್ತಾರೆ !

Update: 2016-12-06 12:05 GMT

ಚೆನ್ನೈ,ಡಿ.6: ನಿನ್ನೆ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಇತರ ದ್ರಾವಿಡ ನಾಯಕರಂತೆ ನಾಸ್ತಿಕರಾಗಿರಲಿಲ್ಲ. ಅವರು ದೇವಸ್ಥಾನಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪೂಜೆಗಳನ್ನು ಸಲ್ಲಿಸುತ್ತಿದ್ದರು. ಅವರ ಹಣೆಯ ಮೇಲೆ ಅಯ್ಯಂಗಾರಿ ನಾಮ ಸದಾ ರಾರಾಜಿಸುತ್ತಿತ್ತು. ಹೀಗಿದ್ದರೂ ಅಯ್ಯಂಗಾರಿಗಳ ವಿಧಿವಿಧಾನಗಳಂತೆ ಜಯಲಲಿತಾರ ಪಾರ್ಥಿವ ಶರೀರವನ್ನು ಚಿತೆಯಲ್ಲಿ ದಹಿಸುವ ಬದಲು ಹೂಳಲು ರಾಜ್ಯ ಸರಕಾರ ಮತ್ತು ಶಶಿಕಲಾ ನಟರಾಜನ್ ಕುಟುಂಬ ನಿರ್ಧರಿಸಿರು ವದೇಕೆ?

ಅಂತಿಮ ಸಂಸ್ಕಾರದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡ ಸರಕಾರದ ಹಿರಿಯ ಕಾರ್ಯದರ್ಶಿಯೋರ್ವರು ಇದಕ್ಕೆ ವಿವರಣೆಯನ್ನು ನೀಡಿದ್ದಾರೆ. ಜಯಲಲಿತಾ ನಮ್ಮ ಪಾಲಿಗೆ ಅಯ್ಯಂಗಾರಿ ಬ್ರಾಹ್ಮಣರಾಗಿರಲಿಲ್ಲ. ಅವರು ಎಲ್ಲ ಜಾತಿಗಳನ್ನು ಮತ್ತು ಧರ್ಮಗಳನ್ನು ಮೀರಿದ್ದರು. ಪೆರಿಯಾರ್,ಅಣ್ಣಾದುರೈ ಮತ್ತು ಎಂಜಿಆರ್ ಸೇರಿದಂತೆ ಹೆಚ್ಚಿನ ಎಲ್ಲ ದ್ರಾವಿಡ ನಾಯಕರನ್ನು ಸಮಾಧಿ ಮಾಡಲಾಗಿದೆ. ಮರಣದ ನಂತರವೂ ನಾಯಕರ ಪಾರ್ಥಿವ ಶರೀರಗಳನ್ನು ಅಗ್ನಿಗೆ ಅರ್ಪಿಸುವ ಪೂರ್ವ ಸಂಪ್ರದಾಯ ನಮ್ಮಲ್ಲಿಲ್ಲ. ಹೀಗಾಗಿ ಅವರನ್ನು ಗಂಧದ ಕಟ್ಟಿಗೆ ಮತ್ತು ಪನ್ನೀರಿನೊಂದಿಗೆ ಹೂಳಲಾಗುತ್ತದೆ ಎಂದು ಹೇಳಿದರು. ದ್ರಾವಿಡ ಚಳವಳಿಯ ಹಿಂದಿನ ನಾಯಕರನ್ನು ಸಮಾಧಿ ಮಾಡಲಾಗಿದ್ದು ಇದು ಸ್ಮಾರಕಗಳ ರೂಪದಲ್ಲಿ ಅವರನ್ನು ನೆನಪಿಸಿಕೊಳ್ಳಲು ಅನುಯಾಯಿಗಳಿಗೆ ಅವಕಾಶ ಕಲ್ಪಿಸಿದೆ.

ದ್ರಾವಿಡ ಚಳವಳಿಯ ನಾಯಕರೆಲ್ಲ ನಾಸ್ತಿಕರೇ ಆಗಿದ್ದಾರೆ. ಅವರು ತಾತ್ವಿಕವಾಗಿ ದೇವರನ್ನು ಮತ್ತು ಅಂತಹ ಸಂಕೇತಗಳನ್ನು ನಂಬುವುದಿಲ್ಲ. ಆದರೆ ದೇವರಲ್ಲಿಯ ಅಪನಂಬಿಕೆಯು ಸೃಷ್ಟಿಸಿರುವ ನಿರ್ವಾತವನ್ನು ದ್ರಾವಿಡ ನಾಯಕರ ಪ್ರತಿಮೆಗಳು ಮತ್ತು ಅವರ ವೈಚಾರಿಕ ಚಿಂತನೆಗಳು ತುಂಬಿರುವುದು ಆಸಕ್ತಿಯ ವಿಷಯವಾಗಿದೆ. ಮರೀನಾ ಬೀಚ್‌ನಲ್ಲಿರುವ ಎಂಜಿಆರ್ ಸಮಾಧಿಯಿಂದ ಅವರ ಕೈಗಡಿಯಾರದ ಟಿಕ್ ಟಿಕ್ ಸದ್ದು ಇನ್ನೂ ಕೇಳುತ್ತಲೇ ಇದೆ ಎಂದು ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ನಂಬಿದ್ದಾರೆ.

ಜಯಲಲಿತಾರ ಪಾರ್ಥಿವ ಶರೀರವನ್ನು ಹೂಳಲು ಇನ್ನೂ ಒಂದು ಕಾರಣ ವಿರಬಹುದು ಎನ್ನುತ್ತಾರೆ ಕಳೆದ ನಾಲ್ಕು ದಶಕಗಳಲ್ಲಿ ಹಲವಾರು ತಮಿಳುನಾಡು ನಾಯಕರ ದಫನ ಪ್ರಕ್ರಿಯೆಗಳಿಗೆ ಸಾಕ್ಷಿಯಾಗಿರುವ ಹಿರಿಯ ರಾಜಕೀಯ ವಿಶ್ಲೇಷಕ ರೋರ್ವರು.

 ಜಯಲಲಿತಾ ಆಸ್ತಿಕರಾಗಿದ್ದರಿಂದ ಸಾವಿನ ಬಳಿಕ ಅವರನ್ನು ಚಿತೆಗೆ ಅರ್ಪಿಸಲಾಗುತ್ತದೆ ಎಂದು ಜನರು ನಿರೀಕ್ಷಿಸುವುದು ಸಹಜವೇ ಆಗಿದೆ. ಆದರೆ ಚಿತೆಗೆ ಅಗ್ನಿಸ್ಪರ್ಶ ನೆರವೇರಿ ಸಲು ರಕ್ತಸಂಬಂಧಿಗಳು ಅಗತ್ಯ. ಇಲ್ಲಿರುವ ಜಯಲಲಿತಾರ ಏಕೈಕ ರಕ್ತಸಂಬಂಧಿ ಎಂದರೆ ಅವರ ಸೋದರ ದಿ.ಜಯಕುಮಾರ ಅವರ ಪುತ್ರಿ ದೀಪಾ ಜಯಕುಮಾರ್ ಆಗಿದ್ದಾರೆ. ಆದರೆ ದೀಪಾರಿಂದ ಪ್ರಬಲ ಸವಾಲು ಎದುರಾಗುವ ಭೀತಿಯಿಂದ ಶಶಿಕಲಾ ನಟರಾಜನ್ ಅವರ ಕುಟುಂಬವು ಅಂತಿಮ ಸಂಸ್ಕಾರದ ಮೆರವಣಿಗೆಯ ಬಳಿಯೂ ಸುಳಿಯಲು ಆಕೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ಬ್ರಿಟನ್ನಿನ ವಿವಿಯೊಂದರಲ್ಲಿ ಮಾಧ್ಯಮ ಮತ್ತು ಸಂವಹನ ಸಂಶೋಧನಾ ವಿದ್ಯಾರ್ಥಿನಿಯಾಗಿರುವ ದೀಪಾ ಸೆ.22ರಿಂದ ಹಲವಾರು ಬಾರಿ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ್ದರೂ ಜಯಲಲಿತಾರನ್ನು ನೋಡಲು ಆಕೆಗೆ ಅವಕಾಶವನ್ನು ನಿರಾಕರಿ ಸಲಾಗಿತ್ತು. ಎರಡು ದಿನಗಳ ಹಿಂದೆ ಅಪೋಲೊ ಆಸ್ಪತ್ರೆಯ ಪ್ರವೇಶದ್ವಾರದ ಬಳಿ ದೀಪಾ ಮತ್ತು ಆಕೆಯ ಪತಿಯನ್ನು ಪೊಲೀಸರು ಬಲವಂತದಿಂದ ಹೊರದಬ್ಬುತ್ತಿರುವ ದೃಶ್ಯ ಕಂಡುಬಂದಿತ್ತು. ದೀಪಾ ಆಸ್ಪತ್ರೆಯನ್ನು ಪ್ರವೇಶಿಸದಂತೆ ಮತ್ತು ಮಾಧ್ಯಮ ಗಳೊಂದಿಗೆ ಮಾತನಾಡದಂತೆ ನೋಡಿಕೊಳ್ಳಿ ಎಂಬ ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಅವರಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News