ಅಮಾಸೆಬೈಲು ಸಂಪೂರ್ಣ ಸೋಲಾರ್ ಗ್ರಾಮ ಪಂಚಾಯತ್

Update: 2016-12-06 15:15 GMT

ಅಮಾಸೆಬೈಲು (ಕುಂದಾಪುರ), ಡಿ.6: ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದಲ್ಲಿ ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಎಲ್ಲ 1872 ಮನೆಗಳಿಗೆ ಹಾಗೂ ಬೀದಿಗಳಿಗೆ 20 ಸೋಲಾರ್ ದೀಪಗಳನ್ನು ಅಳವಡಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಸೋಲಾರ್ ಗ್ರಾಮ ಪಂಚಾಯತ್ ಆಗಿ ಮೂಡಿಬಂದಿದೆ.

ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ (ಎಂಎನ್‌ಆರ್‌ಇ)ದಿಂದ 63ಲಕ್ಷ ರೂ.(ಶೇ.30) ಮತ್ತು ರಾಜ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(ಕೆಆರ್‌ಇಡಿಎಲ್) ಯಿಂದ 42ಲಕ್ಷ ರೂ. (ಶೇ.20) ಅಲ್ಲದೇ ನಕ್ಸಲ್ ಪೀಡಿತ ಪ್ರದೇಶಾಭಿವೃದ್ಧಿ ನಿಧಿಯಿಂದ 25ಲಕ್ಷ ರೂ., ಗ್ರಾಪಂ ಅನುದಾನ ಮತ್ತು ಫಲಾನುಭವಿ ಗಳಿಂದ ಸಂಗ್ರಹಿಸಲಾದ 76ಲಕ್ಷ ರೂ. ವಂತಿಗೆಯೊಂದಿಗೆ ಒಟ್ಟು 2,13,90,300ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ.

ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಅಮಾಸೆಬೈಲು ಗ್ರಾಮದಲ್ಲಿ 692, ರಟ್ಟಾಡಿ ಗ್ರಾಮದಲ್ಲಿ 534, ಮಚ್ಚಟ್ಟು ಗ್ರಾಮದಲ್ಲಿ 646 ಕುಟುಂಬಗಳಿದ್ದು, ಇವುಗಳಲ್ಲಿ ಈ ಮೊದಲೇ ಕೆಲವು ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲಾಗಿತ್ತು. ಬಾಕಿ ಉಳಿದ 1474 ಮನೆಗಳಿಗೆ ಸೋಲಾರ್ ದೀಪ ಅಳವಡಿಸುವ ಕಾರ್ಯಕ್ಕೆ ಜೂ.1ರಂದು ಚಾಲನೆ ನೀಡಲಾಗಿತ್ತು. ಇತರ ಮೂಲಗಳಿಂದ 2ಲಕ್ಷರೂ., ಕಿರುಸಾಲ ಯೋಜನೆಯಿಂದ 6,27,756ರೂ. ಹಣವನ್ನು ಕೂಡ ಸಂಗ್ರಹಿಸಲಾಗಿತ್ತು ಎಂದು ಯೋಜನೆಯನ್ನು ಅನುಷ್ಠಾನ ಗೊಳಿಸಿದ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ, ಮಾಜಿ ಶಾಸಕ ಎ.ಜಿ.ಕೊಡ್ಗಿ ಗ್ರಾಮಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ತಿಳಿಸಿದರು.

6 ತಿಂಗಳಲ್ಲಿ ಯೋಜನೆ ಪೂರ್ಣ:

 ಎರಡು ದೀಪಕ್ಕೆ 9,900ರೂ., ನಾಲ್ಕು ದೀಪಕ್ಕೆ 16,500 ರೂ. ಮತ್ತು ಬೀದಿದೀಪಕ್ಕೆ 20,000 ರೂ. ವೆಚ್ಚವಾಗಿದ್ದು, ಇದಕ್ಕೆ ಫಲಾನುಭವಿಗಳಿಂದ ಎರಡು ದೀಪಕ್ಕೆ 3ಸಾವಿರ ರೂ., ನಾಲ್ಕು ದೀಪಕ್ಕೆ 6ಸಾವಿರ ರೂ. ಮತ್ತು ಬೀದಿದೀಪಕ್ಕೆ ಗ್ರಾಪಂ ಶೇ.50 ಮತ್ತು ಟ್ರಸ್ಟ್ ಶೇ.50ರಷ್ಟು ಹಣ ನೀಡಿತ್ತು. ಅದರಂತೆ ಮೊದಲನೆ ಹಂತದಲ್ಲಿ 64 ಎರಡು ದೀಪದ ಮನೆಗಳು, 333 ನಾಲ್ಕು ದೀಪದ ಮನೆಗಳು, ಎರಡನೆ ಹಂತದಲ್ಲಿ 112 ಎರಡು ದೀಪದ ಮನೆಗಳು, 436 ನಾಲ್ಕು ದೀಪದ ಮನೆಗಳು ಮತ್ತು ಮೂರನೆ ಹಂತದಲ್ಲಿ 327 ಎರಡು ದೀಪದ ಮನೆಗಳು, 202 ನಾಲ್ಕು ದೀಪದ ಮನೆಗಳಿಗೆ ಸೋಲಾರ್ ಅಳವಡಿಸಲಾಗಿದೆ. ಈ ಮೂಲಕ ಯೋಜನೆ ಕೈಗೆತ್ತಿಗೊಂಡ ಆರೇ ತಿಂಗಳಲ್ಲಿ ಗುರಿಯನ್ನು ಸಂಪೂರ್ಣಗೊಳಿಸಲಾಗಿದೆ.

‘ದೀಪ ಅಳವಡಿಕೆಯ ನಂತರ ಐದು ವರ್ಷಗಳ ಸಂಪೂರ್ಣ ಗ್ಯಾರಂಟಿ ಯೊಂದಿಗೆ ನಿರ್ವಹಣೆ ಮಾಡಲಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಸರ್ವೆ ಮಾಡಲಾಗುತ್ತದೆ. ಸಮಸ್ಯೆ ಬಂದರೆ 24ಗಂಟೆಯೊಳಗೆ ದುರಸ್ತಿ ಮಾಡಿಕೊಡ ಲಾಗುತ್ತದೆ. ಅದಕ್ಕಾಗಿ ಅಮಾಸೆಬೈಲಿನಲ್ಲಿ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳ ಲಾಗಿದೆ’ ಎಂದು ಸೆಲ್ಕೋ ಸೋಲಾರ್ ಲೈಟ್‌ನ ಸಹಾಯಕ ಮಹಾ ಪ್ರಬಂಧಕ ಗುರುಪ್ರಕಾಶ್ ಶೆಟ್ಟಿ ತಿಳಿಸಿದರು.

ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಎಲ್ಲ ಮನೆಗಳಿಂದ ದಿನಕ್ಕೆ ಒಟ್ಟು 60 ಯುನಿಟ್ ವಿದ್ಯುತ್‌ನ್ನು ಉತ್ಪಾದಿಸಲಾಗುತ್ತಿದೆ. ಇದರಿಂದ ಸರಕಾರಕ್ಕೆ 120 ಯೂನಿಟ್ ವಿದ್ಯುತ್ ಉಳಿತಾಯವಾಗುತ್ತಿದೆ. ಮುಂದೆ ಗ್ರಾಪಂ ವ್ಯಾಪ್ತಿ ಯಲ್ಲಿರುವ 217 ಅಂಗಡಿ ಮುಗ್ಗಟ್ಟುಗಳಿಗೂ ಸೋಲಾರ್ ದೀಪಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆಯುತ್ತಿದೆ.

ಕೊರಗರ ಬದುಕಿಗೆ ಬೆಳಕು:ನಕ್ಸಲ್ ಬಾಧಿತ ಪ್ರದೇಶ ವ್ಯಾಪ್ತಿಯ ಲ್ಲಿರುವ ಅಮಾಸೆಬೈಲು ಗ್ರಾಮದ ದಟ್ಟ ಅರಣ್ಯದಲ್ಲಿ ಬದುಕುತ್ತಿರುವ ಸಾಕಷ್ಟು ಕೊರಗ ಕುಟುಂಬಗಳಿಗೆ ಈ ಯೋಜನೆ ವರವಾಗಿ ಪರಿಣಮಿಸಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ 36 ಕೊರಗ ಕುಟುಂಬಗಳ ಮನೆಗಳಿಗೆ ಉಚಿತವಾಗಿ ಸೋಲಾರ್ ದೀಪ ಅಳವಡಿಸಲಾಗಿದೆ. ಇದರ ವೆಚ್ಚವನ್ನು ಗ್ರಾಪಂ ತನ್ನ ಅನುದಾನದಲ್ಲಿ ಒದಗಿಸಿದೆ. ಹಳೆ ಅಮಾಸೆಬೈಲಿನ ಕುಬ್ಬುಜೆಡ್ಡುವಿನಲ್ಲಿರುವ ಕೊರಗ ಕಾಲನಿಯಲ್ಲಿ ಸುಮಾರು 13 ಮನೆಗಳಿದ್ದು, ಈ ಎಲ್ಲ ಮನೆಗಳಲ್ಲಿ ಈಗ ಸೋಲಾರ್ ದೀಪ ಬೆಳಗುತ್ತಿವೆ. ಅಲ್ಲದೆ ಇಲ್ಲಿ ಸೋಲಾರ್ ದಾರಿ ದೀಪದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇವರು ಕಾಡಿನಿಂದ ಕುಸುಬ ಮತ್ತು ನೆಡ್ಲಿ ಬೇರನ್ನು ತಂದು ಬುಟ್ಟಿ ನೇಯ್ಯುವ ಕೆಲಸ ಮಾಡುತ್ತಿದ್ದು, ರಾತ್ರಿ ವೇಳೆ ವಿದ್ಯುತ್ ಸಮಸ್ಯೆಯಿಂದ ತೊಂದರೆ ಪಡುತ್ತಿದ್ದರು. ‘ಮನೆಗೆ ಎರಡು ಸೋಲಾರ್ ದೀಪಗಳನ್ನು ಅಳ ಪಡಿಸಲಾಗಿದೆ. ಇದರಿಂದಾಗಿ ಈಗ ರಾತ್ರಿಯೂ ನಾವು ಕೆಲಸ ಮಾಡಬಹು ದಾಗಿದೆ. ವಿದ್ಯುತ್ ಕೈಕೊಟ್ಟಾಗ ನಮಗೆ ಸೋಲಾರ್ ದೀಪ ಬಹಳಷ್ಟು ಸಹಾಯವಾಗುತ್ತಿದೆ.

ಅಲ್ಲದೆ ಮಕ್ಕಳು ರಾತ್ರಿ ವೇಳೆ ಓದಲು ಕೂಡ ಅನು ಕೂಲವಾಗಿದೆ ಎನ್ನುತ್ತಾರೆ ಬಾಬು ಕೊರಗ ಹಾಗೂ ಬೀಚು ಕೊರಗ. ಗ್ರಾಪಂ ಆದಾಯ ಮೂಲಗಳ ಶೇ.25ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ 117 ಮನೆಗಳಿಗೆ ಸೋಲಾರ್ ದೀಪ ಅಳವಡಿಸಲು ನೀಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ 2.36ಲಕ್ಷ ರೂ. ಅನುದಾನವನ್ನು ಒದಗಿಸಲಾಗಿದೆ. ಇದೀಗ ಮತ್ತಷ್ಟು ಬೇಡಿಕೆಗಳು ಬರು ತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮಾಸೆಬೈಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾಸ್ಕರ್ ಶೆಟ್ಟಿ ತಿಳಿಸಿದರು.

‘ಮೂರು ತಿಂಗಳ ಹಿಂದೆ ಮನೆಗೆ ನಾಲ್ಕು ಸೋಲಾರ್ ದೀಪಗಳನ್ನು ಅಳವಡಿಸಿದ್ದೇನೆ. ಇದರಿಂದ ತಿಂಗಳ ವಿದ್ಯುತ್ ಬಿಲ್‌ನಲ್ಲಿ 150ರೂ. ಉಳಿತಾಯವಾಗುತ್ತಿದೆ. ಇದೇ ಸೋಲಾರ್ ವಿದ್ಯುತ್‌ನಲ್ಲಿ ಮೊಬೈಲ್ ಕೂಡ ಚಾರ್ಚ್ ಮಾಡುತ್ತಿದ್ದೇವೆ. ವಿದ್ಯುತ್ ಕೈಕೊಟ್ಟಾಗ ಸೋಲಾರ್ ಬಳಸಿಕೊಳ್ಳುತ್ತಿ ದ್ದೇವೆ’ ಎಂದು  ಗ್ರಾಮಸ್ಥ ಸುಧಾಕರ್ ಶೇಟ್ ಹೇಳುತ್ತಾರೆ.

ಇಂದಿನ ವಿದ್ಯುತ್ ಕಣ್ಣುಮುಚ್ಚಲೆ ಆಟಕ್ಕೆ ಪರಿಹಾರ ಮತ್ತು ವಿದ್ಯುತ್ ಬಿಲ್‌ನಲ್ಲಿ ಉಳಿತಾಯ ಮಾಡಿಕೊಳ್ಳುವ ಉದ್ದೇಶದಿಂದ ಈ ಯೋಜನೆ ಯನ್ನು ಕೆಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಗ್ರಾಪಂ ವ್ಯಾಪ್ತಿಯ ಎಲ್ಲ ಮನೆ ಗಳಿಗೆ ಸೋಲಾರ್ ದೀಪವನ್ನು ಅಳವಡಿಸಲಾಗಿದೆ. ಇದರಿಂದ ಸರಕಾರಕ್ಕೂ ಕೂಡ ವಿದ್ಯುತ್ ಉಳಿತಾಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್  ಅಧ್ಯಕ್ಷ  ಎ.ಜಿ.ಕೊಡ್ಗಿ .

ಅರಣ್ಯ ಪ್ರದೇಶವಾಗಿರುವ ಅಮಾಸೆಬೈಲಿನ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿರುತ್ತದೆ. ಒಂದು ಮರ ಬಿದ್ದು ನಾಲ್ಕೈದು ವಿದ್ಯುತ್ ಕಂಬ ಗಳು ಹಾನಿಗೀಡಾದಾಗ ಇಡೀ ಗ್ರಾಮ ಕತ್ತಲೆಯಲ್ಲಿ ಮುಳುಗುತ್ತದೆ. ಈ ಯೋಜನೆಯಿಂದ ಮಳೆಗಾಲದಲ್ಲಿ ಕತ್ತಲು ಸಮಸ್ಯೆ ದೂರವಾಗುತ್ತದೆ. ಗ್ರಾಮಸ್ಥರ ಸಹಕಾರದಿಂದ ಈ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ  ಎಂದು ಅಮಾಸೆಬೈಲು ಗ್ರಾಪಂ ಅಧ್ಯಕ್ಷರಾದ ಜಯಲಕ್ಷ್ಮೀ ಶೆಟ್ಟಿ ಸಂತಸ ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News