ತೈವಾನ್ ಅಧ್ಯಕ್ಷೆಗೆ ಅಮೆರಿಕ ಮೂಲಕ ಹಾದು ಹೋಗಲು ಬಿಡಬೇಡಿ : ಅಮೆರಿಕಕ್ಕೆ ಚೀನಾ ಕರೆ

Update: 2016-12-06 15:21 GMT

ಬೀಜಿಂಗ್, ಡಿ. 6: ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್ ಮುಂದಿನ ತಿಂಗಳು ಗ್ವಾಟೆಮಾಲಾ ದೇಶಕ್ಕೆ ಭೇಟಿ ನೀಡುವಾಗ ಅವರಿಗೆ ಅಮೆರಿಕದ ಮೂಲಕ ಹಾದು ಹೋಗಲು ಅವಕಾಶ ನೀಡಬಾರದು ಎಂಬುದಾಗಿ ಚೀನಾ ಅಮೆರಿಕಕ್ಕೆ ಮಂಗಳವಾರ ಕರೆ ನೀಡಿದೆ.

ತೈವಾನ್ ತನಗೆ ಸೇರಿದ್ದು ಎಂಬುದಾಗಿ ಚೀನಾ ಭಾವಿಸಿದೆ. ದ್ವೀಪ ರಾಷ್ಟ್ರದಲ್ಲಿ ಈಗ ಸ್ವಆಡಳಿತದ ಸರಕಾರವಿದೆ. ಅಧ್ಯಕ್ಷೆ ತ್ಸಾಯಿ ತೈವಾನ್‌ನ ಔಪಚಾರಿಕ ಸ್ವಾತಂತ್ರಕ್ಕಾಗಿ ಪ್ರಯತ್ನಿಸುತ್ತಿರಬಹುದು ಎಂಬ ದಟ್ಟ ಸಂಶಯವನ್ನು ಚೀನಾ ಹೊಂದಿದೆ.

ಶುಕ್ರವಾರ ತ್ಸಾಯಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಫೋನ್‌ನಲ್ಲಿ ಮಾತನಾಡುವ ಮೂಲಕ ಚೀನಾದ ಕೆಂಗಣ್ಣಿಗೆ ಕಾರಣರಾಗಿದ್ದರು. ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ 1979ರಲ್ಲಿ ರಾಜತಾಂತ್ರಿಕ ಮಾನ್ಯತೆಯನ್ನು ತೈವಾನ್‌ನಿಂದ ಚೀನಾಕ್ಕೆ ವರ್ಗಾಯಿಸಿದ ಬಳಿಕ ಆ ದೇಶದ ಅಧ್ಯಕ್ಷ ಅಥವಾ ನಿಯೋಜಿತ ಅಧ್ಯಕ್ಷರೊಬ್ಬರು ತೈವಾನ್ ಅಧ್ಯಕ್ಷರೊಂದಿಗೆ ಸಂವಹನ ನಡೆಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ತ್ಸಾಯಿ ಜನವರಿ 11 ಮತ್ತು 12ರಂದು ಗ್ವಾಟೆಮಾಲಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಗ್ವಾಟೆಮಾಲಾದ ವಿದೇಶ ಸಚಿವ ಕಾರ್ಲೋಸ್ ರವುಲ್ ಮೊರಾಲ್ಸ್ ‘ರಾಯ್ಟರ್ಸ್’ಗೆ ತಿಳಿಸಿದರು.

ತ್ಸಾಯಿ ಮುಂದಿನ ತಿಂಗಳು ಮಧ್ಯ ಅಮೆರಿಕದ ಮಿತ್ರ ದೇಶಗಳಾದ ನಿಕಾರಗುವ, ಗ್ವಾಟೆಮಾಲಾ ಮತ್ತು ಎಲ್ ಸಾಲ್ವಡೋರ್‌ಗಳಿಗೆ ಭೇಟಿ ನೀಡುವಾಗ ನ್ಯೂಯಾರ್ಕ್ ಮೂಲಕ ಹಾದು ಹೋಗಲಿದ್ದಾರೆ ಎಂಬುದಾಗಿ ತ್ಸಾಯಿ ಅವರ ಆಡಳಿತಾರೂಢ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಹಿತೈಶಿ ಎಂಬುದಾಗಿ ಪರಿಗಣಿಸಲ್ಪಟ್ಟಿರುವ ತೈವಾನ್‌ನ ‘ಲಿಬರ್ಟಿ ಟೈಮ್ಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News