ಪರ್ಲ್ ಹಾರ್ಬರ್‌ನಲ್ಲಿ ಜಪಾನ್ ಪ್ರಧಾನಿ ಕ್ಷಮೆ ಕೋರುವುದಿಲ್ಲ
ಟೋಕಿಯೊ, ಡಿ. 6: ಮುಂದಿನ ತಿಂಗಳು ಪರ್ಲ್ ಹಾರ್ಬರ್‌ಗೆ ಭೇಟಿ ನೀಡುವ ವೇಳೆ ಜಪಾನ್ ಪ್ರಧಾನಿ ಶಿಂರೊ ಅಬೆ ಯುದ್ಧದಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸುತ್ತಾರೆ, ಆದರೆ ಕ್ಷಮೆ ಕೋರುವುದಿಲ್ಲ ಎಂದು ಜಪಾನ್ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
ಈ ವರ್ಷದ ಮೇ ತಿಂಗಳಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅಣುಬಾಂಬ್ ಸಂತ್ರಸ್ತ ಹಿರೋಶಿಮ ನಗರಕ್ಕೆ ಭೇಟಿ ನೀಡಿದ ಬಳಿಕ ಜಪಾನ್ ಪ್ರಧಾನಿ ಪರ್ಲ್ ಹಾರ್ಬರ್‌ಗೆ ಭೇಟಿ ನೀಡಲಿದ್ದಾರೆ.
ಅಮೆರಿಕದ ಹಾಲಿ ಅಧ್ಯಕ್ಷರೊಬ್ಬರು ಹಿರೋಶಿಮಕ್ಕೆ ಭೇಟಿ ನೀಡಿರುವುದು ಅದೇ ಪ್ರಥಮವಾಗಿತ್ತು. ಒಬಾಮ ಹಿರೋಶಿಮದಲ್ಲಿ ಪರಮಾಣು ಬಾಂಬ್ ಸಂತ್ರಸ್ತರೊಂದಿಗೆ ಮಾತನಾಡಿದ್ದರು, ಆದರೆ, ಪರಮಾಣು ಬಾಂಬ್ ಹಾಕಿದ್ದಕ್ಕೆ ಕ್ಷಮೆ ಕೋರಿರಲಿಲ್ಲ.
ಈಗ ಜಪಾನ್ ಪ್ರಧಾನಿಯೊಬ್ಬರು ಪರ್ಲ್ ಹಾರ್ಬರ್‌ಗೆ ಭೇಟಿ ನೀಡಲಿರುವುದೂ ಪ್ರಥಮವಾಗಿದೆ.
1941 ಡಿಸೆಂಬರ್ 7ರಂದು ಪರ್ಲ್ ಹಾರ್ಬರ್‌ನಲ್ಲಿರುವ ಅಮೆರಿಕದ ನೌಕಾ ನೆಲೆಯ ಮೇಲೆ ಜಪಾನ್ ದಾಳಿ ಮಾಡಿತ್ತು. ಅದರೊಂದಿಗೆ ದ್ವಿತೀಯ ಮಹಾಯುದ್ಧ ಆರಂಭಗೊಂಡಿತ್ತು. ಈ ವರ್ಷ ಆ ದಾಳಿಗೆ 75 ವರ್ಷಗಳು ತುಂಬುತ್ತಿವೆ.
ಜಪಾನ್ ಮೇಲೆ ಎರಡು ಪರಮಾಣು ಬಾಂಬ್‌ಗಳನ್ನು ಅಮೆರಿಕ ಹಾಕುವುದರೊಂದಿಗೆ 1945 ಆಗಸ್ಟ್‌ನಲ್ಲಿ ಯುದ್ಧ ಕೊನೆಗೊಂಡಿತ್ತು.