ವಾಗ್ದಂಡನೆ ಫಲಿತಾಂಶ ಸ್ವೀಕರಿಸಲು ಕೊರಿಯ ಅಧ್ಯಕ್ಷೆ ಸಿದ್ಧ
Update: 2016-12-06 21:03 IST
ಸಿಯೋಲ್, ಡಿ. 6: ಈ ವಾರ ತನ್ನ ವಿರುದ್ಧ ನಡೆಯಲಿರುವ ವಾಗ್ದಂಡನೆ ಮತದಾನದ ಫಲಿತಾಂಶವನ್ನು ಸ್ವೀಕರಿಸುವೆ ಎಂಬುದಾಗಿ ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುಯನ್ ಹೈ ಮಂಗಳವಾರ ಹೇಳಿದ್ದಾರೆ. ಆದರೆ, ಪ್ರತಿಪಕ್ಷಗಳ ಬೇಡಿಕೆಯಂತೆ ಈಗ ಅಧಿಕಾರದಿಂದ ಕೆಳಗಿಳಿಯುವುದಿಲ್ಲ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಆಕೆಯ ಸೇನುರಿ ಪಕ್ಷದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮುಂದಿನ ವರ್ಷದ ಎಪ್ರಿಲ್‌ನಲ್ಲಿ ತಾನು ಅಧಿಕಾರ ತ್ಯಜಿಸಲು ತನ್ನ ಪಕ್ಷ ಮುಂದಿಟ್ಟಿರುವ ಪ್ರಸ್ತಾಪವನ್ನು ಸ್ವೀಕರಿಸಲು ಸಿದ್ಧವಿರುವುದಾಗಿಯೂ ಅವರು ಹೇಳಿದ್ದಾರೆ ಎಂದು ಸೇನುರಿ ಪಕ್ಷದ ಅಧಿಕಾರಿ ಚುಂಗ್ ಜಿನ್ ಸುಕ್ ಹೇಳಿದರು.
ಪಕ್ಷದ ನಾಯಕರು ಮತ್ತು ದೋಷಾರೋಪಕ್ಕೆ ಗುರಿಯಾಗಿರುವ ಅಧ್ಯಕ್ಷೆ ನಡುವಿನ ಮಾತುಕತೆಯ ಬಳಿಕ ಅವರು ಈ ವಿಷಯವನ್ನು ಪ್ರಕಟಿಸಿದರು.