×
Ad

ಜಯಲಲಿತಾಗೆ ಹಲವು ಮಿತ್ರರು, ಆದರೆ ಯಾರೂ ಬಾಳಿಕೆ ಬರಲಿಲ್ಲ

Update: 2016-12-06 21:22 IST

ಚೆನ್ನೈ,ಡಿ.6: ಸೋಮವಾರ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ತನ್ನ ರಾಜಕೀಯ ಮತ್ತು ಚಿತ್ರರಂಗ ವೃತ್ತಿಜೀವನದ ವಿವಿಧ ಮಜಲುಗಳಲ್ಲಿ ಹಲವಾರು ಜನರೊಂದಿಗೆ ಕೆಲಸ ಮಾಡಿದ್ದರೂ ಪ್ರತಿಯೊಬ್ಬರಿಗೂ ಅವರೊಂದಿಗೆ ಗೆಳೆತನವನ್ನು ಕೊನೆಯವರೆಗೂ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ತನ್ನ ಅಭಿನಯ ವೃತ್ತಿಜೀವನದ ಆರಂಭದ ದಿನಗಳಲ್ಲಿ ಜಯಲಲಿತಾ ತನ್ನ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿಆರ್‌ಒ) ಆಗಿ ‘ಫಿಲ್ಮ್ ನ್ಯೂಸ್ ’ನ ಆನಂದನ್ ಅವರನ್ನು ನೇಮಿಸಿಕೊಂಡಿದ್ದರು. ವಾಸ್ತವದಲ್ಲಿ ಅವರು ಪೂರ್ಣ ಕಾಲಾವಧಿಗೆ ಪಿಆರ್‌ಒ ನೇಮಿಸಿಕೊಂಡ ದಕ್ಷಿಣ ಭಾರತದ ಮೊದಲ ತಾರೆಯಾಗಿದ್ದರು. ಅವರಿಬ್ಬರೂ ಸ್ನೇಹಿತರಾಗಿ ಉಳಿದಿದ್ದು, 1930ರಿಂದ ತಮಿಳು ಚಿತ್ರರಂಗದ ಇತಿಹಾಸ ಕುರಿತು ಅನಂದನ್ ಅವರು 2013ರಲ್ಲಿ ರಚಿಸಿದ್ದ ಪುಸ್ತಕಕ್ಕೆ ಜಯಲಲಿತಾ ಆರ್ಥಿಕ ನೆರವು ನೀಡಿದ್ದರು.

ಜಯಲಲಿತಾ ರಾಜಕೀಯವನ್ನು ಪ್ರವೇಶಿಸಿದಾಗ ಹಿರಿಯ ಪತ್ರಕರ್ತ ಸೋಲೈ ಅವರ ವಿಶ್ವಾಸವನ್ನು ಗಳಿಸಿದ್ದರು. ಅವರಿಗಾಗಿ ಕೆಲಸ ಮಾಡುವಂತೆ ಆಗಿನ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರು ಸೋಲೈಯವರ ಮನವೊಲಿಸಿದ್ದರು. ಮುಖ್ಯಮಂತ್ರಿ ಯಾಗಿ ತನ್ನ ಕರ್ತವ್ಯಗಳ ಹೊರೆಯಿಂದಾಗಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುವುದು ತನಗೆ ಸಾಧ್ಯವಾಗುತ್ತಿಲ್ಲ,ಹೀಗಾಗಿ ಜಯಲಲಿತಾರನ್ನು ರಾಜಕೀಯ ರಂಗಕ್ಕೆ ಕರೆತರಲು ತಾನು ನಿರ್ಧರಿಸಿರುವುದಾಗಿ ಅವರು ಸೋಲೈಗೆ ತಿಳಿಸಿದ್ದರು.

ಜಯಾಗೆ ಭಾಷಣಕಲೆಯಲ್ಲಿ ತರಬೇತಿ ನೀಡುವಂತೆ ಎಂಜಿಆರ್ ತನಗೆ ಸೂಚಿಸಿದ್ದರು. ಆಕೆ ತಕ್ಷಣವೇ ಅದನ್ನು ಗ್ರಹಿಸಿದ್ದರು. ಆಕೆಯ ಸಭೆಗಳಿಗೆ ಸೇರುತ್ತಿದ್ದ ಜನಸಂದಣಿಯನ್ನು ಕಂಡು ಎದುರಾಳಿ ಡಿಎಂಕೆ ದಂಗು ಬಡಿದುಹೋಗಿತ್ತು. ಕರುಣಾನಿಧಿಯವರ ಟೀಕೆಗಳಿಗೆ ಅವರು ಪರಿಣಾಮಕಾರಿಯಾಗಿ ತಿರುಗೇಟುಗಳನ್ನು ನೀಡುತ್ತಿದ್ದರು ಎಂದು ಸೋಲೈ ನೆನಪಿಸಿಕೊಂಡಿದ್ದರು.

ಆದರೆ ಅವರ ಸ್ನೇಹ ತುಂಬ ದಿನಗಳ ಕಾಲ ಬಾಳಲಿಲ್ಲ. ಸೋಲೈ ಎಂಜಿಆರ್‌ಗೆ ನಿಕಟರಾಗಿದ್ದಾರೆ ಮತ್ತು ತನಗೆ ಪೂರ್ಣಪ್ರಮಾಣದಲ್ಲಿ ನಿಷ್ಠೆಯನ್ನು ತೋರಿಸುತ್ತಿಲ್ಲ ಎಂದು ಜಯಲಲಿತಾ ಭಾವಿಸಿದ್ದರು. ಸ್ವತಃ ಸೋಲೈ ತನಗೆ ಇದನ್ನು ತಿಳಿಸಿದ್ದರು ಎಂದು ಹಿರಿಯ ಪತ್ರಕರ್ತ ಜವಾಹರ್ ಹೇಳಿದರು.

ಜಯಲಲಿತಾರೊಂದಿಗೆ ‘ತುಘಲಕ್’ ಸಂಪಾದಕ ‘ಚೋ’ರಾಮಸ್ವಾಮಿಯವರ ಸಂಬಂಧ ಏಳುಬೀಳುಗಳಿಂದ ಕೂಡಿತ್ತು. ವೈ.ಜಿ.ಪಾರ್ಥಸಾರಥಿಯವರ ನಾಟಕ ತಂಡ ಯುನೈಟೆಡ್ ಅಮ್ಯೆಚೂರ್ ಆರ್ಟಿಸ್ಟ್ಸ್‌ಗಾಗಿ ಕೆಲಸ ಮಾಡುವುದರೊಡನೆ ಅವರಿಬ್ಬರ ಸ್ನೇಹ ಆರಂಭಗೊಂಡಿತ್ತು. ಆದರೆ 1996ರಲ್ಲಿ ಡಿಎಂಕೆ ಮತ್ತು ತಮಿಳು ಮಾನಿಲ ಕಾಂಗ್ರೆಸ್ ನಡುವೆ ಮೈತ್ರಿ ಕುದುರಿಸಿ,,ಮೈತ್ರಿಕೂಟಕ್ಕೆ ಸೂಪರ್‌ಸ್ಟಾರ್ ರಜನೀಕಾಂತ್ ಅವರ ಬೆಂಬಲವನ್ನು ಪಡೆಯುವಲ್ಲಿ ಚೋ ಯಶಸ್ವಿಯಾದಾಗ ಈ ಸ್ನೇಹ ಹಳಸಿತ್ತು.

ಚೋ ತನ್ನ ಸ್ನೇಹಿತನೆಂದು ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಜಯಲಲಿತಾ ಬಹಿರಂಗವಾಗಿಯೇ ಘೋಷಿಸಿದ್ದರು. ಬಳಿಕ ಅವರ ನಡುವೆ ಮತ್ತೊಮ್ಮೆ ಸ್ನೇಹ ಕುದುರಿದ್ದು 2011,ಡಿಸೆಂಬರ್‌ನಲ್ಲಿ ಶಶಿಕಲಾ ನಟರಾಜನ್ ಮತ್ತು ಬಳಗವನ್ನು ಜಯಲಲಿತಾರ ಪೋಯೆಸ್ ಗಾರ್ಡನ್ ನಿವಾಸದಿಂದ ಉಚ್ಚಾಟಿಸುವಲ್ಲಿ ಚೋ ಪ್ರಮುಖ ಪಾತ್ರ ವಹಿಸಿದ್ದರು.

 1996ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಡಿಎಂಕೆ ಪಕ್ಷವು ಸೋಲು ಅನುಭವಿಸಿದಾಗ ಜಯಲಲಿತಾರ ರಾಜಕೀಯ ಭವಿಷ್ಯವನ್ನು ಪುನರ್‌ರೂಪಿಸುವಲ್ಲಿ ಚುನಾವಣಾ ವಿಶ್ಲೇಷಕ ವಿ.ಭಾಸ್ಕರನ್ ನೇತೃತ್ವದ ನಾಲ್ವರು ಸದಸ್ಯರ ತಂಡವು ಕೆಲಕಾಲ ಪ್ರಮುಖ ಪಾತ್ರ ವಹಿಸಿತ್ತು. ಚುನಾವಣೆಗೆ ಮುನ್ನ ಜಯಾ ಜೊತೆಗೆ ಕಾರ್ಯವನ್ನಾ ್ನರಂಭಿಸಿದ್ದ ಭಾಸ್ಕರನ್ ಚುನಾವಣೆಯಲ್ಲಿ ಪಕ್ಷವು ಸೋಲಲಿದೆ ಎಂದು ತಿಳಿಸಿದ್ದರು.

 ಅವರ ಸಲಹೆಯ ಮೇರೆಗೇ ಜಯಲಲಿತಾ ಶಶಿಕಲಾರನ್ನು ಮನೆಯಿಂದ ಹೊರಗಟ್ಟಿದ್ದರು. 2001ರಲ್ಲಿ ಎಡಿಎಂಕೆ ಅಧಿಕಾರಕ್ಕೆ ಮರಳಿದಾಗ ಭಾಸ್ಕರನ್ ಮಾದಕ ದ್ರವ್ಯ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದರಾದರೂ, ಮದ್ರಾಸ್ ಉಚ್ಚ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು. 2013,ಡೆಸೆಂಬರ್‌ನಲ್ಲಿ ಅವರು ನಿಧನರಾದರು.

ಹಾಲಿ ಜಯಲಲಿತಾರ ಕಟು ಟೀಕಾಕಾರರಾದ ದ್ರಾವಿಡರ್ ಕಳಗಮ್‌ನ ಕೆ.ವೀರಮಣಿ ಹಲವಾರು ವರ್ಷಗಳ ಕಾಲ ಅವರ ಸಲಹೆಗಾರರಾಗಿದ್ದರು. ಸರಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಶೇ.69 ಮೀಸಲಾತಿಯನ್ನು ಒದಗಿಸಲು ಶಾಸನ ರೂಪಿಸಿದ ಬಳಿಕ ಜಯಾರನ್ನು ‘ಸಮೂಹ ನೀತಿ ಕಥಾ ವೀರಾಂಗನೈ(ಸಾಮಾಜಿಕ ನ್ಯಾಯ ಎತ್ತಿಹಿಡಿದ ನಾಯಕಿ)’ ಎಂಬ ಬಿರುದನ್ನೂ ನೀಡಿದ್ದರು. 1998ರಲ್ಲಿ ಜಯಲಲಿತಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಅವರ ಸ್ನೇಹವನ್ನು ಉಳಿಸಿಕೊಳ್ಳಲು ಸಮರ್ಥರಾಗಿದ್ದ ವೀರಮಣಿ ಬಳಿಕ ಡಿಎಂಕೆಯ ಪ್ರಬಲ ಬೆಂಬಲಿಗರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News