ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ ಮುಖ್ಯಮಂತ್ರಿಗಳು ಎಷ್ಟು ?
ಹೊಸದಿಲ್ಲಿ, ಡಿ.7 : ಜಯಲಲಿತಾ ಅವರ ಸಾವು ತಮಿಳುನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅಂದ ಹಾಗೆ ಅಧಿಕಾರದಲ್ಲಿರುವಾಗಲೇ ಮೃತ ಪಟ್ಟ ಏಕೈಕ ಮುಖ್ಯಮಂತ್ರಿ ಅವರಾಗಿರಲಿಲ್ಲ. ಈಗಾಗಲೇ ಹಲವು ನಾಯಕರು ಮುಖ್ಯಮಂತ್ರಿ ಹುದ್ದೆಯಲ್ಲಿರುವಾಗಲೇ ಸಾವನ್ನಪ್ಪಿದ್ದಾರೆ. ಇಲ್ಲಿದೆ ಕೆಲ ಉದಾಹರಣೆಗಳು.
1. ಗೋಪಿನಾಥ್ ಬೋರ್ಡೊಲೊಯ್
ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿರುವ ಗೋಪಿನಾಥ್ ತಾವು ಅಧಿಕಾರದಲ್ಲಿರುವಾಗಲೇ ಆಗಸ್ಟ್ 6, 1950ರಂದು ನಿಧನ ಹೊಂದಿದ್ದರು. ಲೋಕಪ್ರಿಯ ಎಂಬ ಬಿರುದಾಂಕಿತರಾಗಿದ್ದ ಗೋಪಿನಾಥ್ ಅವರು ಅಸ್ಸಾಂ ಜನರ ಬಗ್ಗೆ ತಮಗಿರುವ ಅತೀವ ಪ್ರೀತಿ ಹಾಗೂ ಕಾಳಜಿಯಿಂದ ಜನಪ್ರಿಯರಾಗಿದ್ದರು. ಅವರಿಗೆ 1999ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲಾಗಿತ್ತು.
2. ರವಿಶಂಕರ್ ಶುಕ್ಲ
ಪುನರ್ ವಿಂಗಡಿತ ಮಧ್ಯ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಶುಕ್ಲ ನವೆಂಬರ್ 1, 1956 ರಿಂದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಅದೇ ವರ್ಷದ ಡಿಸೆಂಬರ್ 31 ರಂದು ಅವರು ಕೊನೆಯುಸಿರೆಳೆದಿದ್ದರು. ದೇಶ ಕಂಡ ಅತ್ಯುತ್ತಮ ಆಡಳಿತಗಾರರಲ್ಲೊಬ್ಬರೆಂದು ಪರಿಗಣಿತರಾಗಿದ್ದ ಶುಕ್ಲ ಭಿಲಾಯಿ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
3. ಶ್ರೀ ಕೃಷ್ಣ ಸಿಂಗ್
ಬಿಹಾರದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಇವರು ಜನವರಿ 31, 1961ರಲ್ಲಿ ಮೃತ ಪಟ್ಟಿದ್ದರು. ಬಿಹಾರ ರಾಜ್ಯವನ್ನು ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದ ಅವರ ಆಡಳಿತಾವಧಿಯಲ್ಲಿ ಬಿಹಾರ ರಾಜ್ಯವು ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ್ದ ರಾಜ್ಯವಾಗಿತ್ತು.
4. ಬಿಧನ್ ಚಂದ್ರ ರಾಯ್
ಪಶ್ಚಿಮ ಬಂಗಾಳದ ಎರಡನೆ ಮುಖ್ಯಮಂತ್ರಿಯಾಗಿದ್ದ ರಾಯ್ 1948 ರಿಂದ ಆ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಮುಖ್ಯಮಂತ್ರಿಯಾಗಿರುವಾಗಲೇ ಅವರು ಜುಲೈ 1, 1962ರಂದು ಇಹಲೋಕ ತ್ಯಜಿಸಿದ್ದರು. ಅವರ ಹುಟ್ಟು ಮತ್ತು ಸಾವಿನ ದಿನಾಂಕ ಒಂದೇ ಆಗಿದ್ದು ಅದನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶ ಕಂಡ ಮಹೋನ್ನತ ವೈದ್ಯರಲ್ಲಿ ರಾಯ್ ಒಬ್ಬರಾಗಿದ್ದರು.
5. ಮರೋಟರಾವ್ ಕಣ್ಣಮ್ವರ್
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಇವರು ನವೆಂಬರ್ 20, 1962ರಿಂದ ನವೆಂಬರ್ 24 1963ರ ತನಕ ಅಧಿಕಾರದಲ್ಲಿದ್ದು. ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವಾಗಲೇ 53 ವರ್ಷ ವಯಸ್ಸಿನಲ್ಲಿ ನಿಧನ ಹೊಂದಿದ್ದರು.
6. ಸಿ ಎನ್ ಅಣ್ಣಾದೊರೈ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದ ಇವರು ಅಣ್ಣಾ ಹಾಗೂ ಅರಿಗ್ನರ್ ಅಣ್ಣಾ ಎಂದೇ ಖ್ಯಾತರಾಗಿದ್ದರು. ಪ್ರಥಮ ಕಾಂಗ್ರೆಸ್ಸೇತರ ರಾಜ್ಯ ಸರಕಾರ ಅವರದಾಗಿತ್ತು. ಅವರು ಕ್ಯಾನ್ಸರ್ ಕಾಯಿಲೆಯಿಂದ ಫೆಬ್ರವರಿ 3, 1969 ರಂದು ಮೃತಪಟ್ಟಿದ್ದರು.
7. ದಯಾನಂದ್ ಬಂಡೋಡ್ಕರ್
ಪೋರ್ಚುಗೀಸರು ಹೊರ ಹೋದ ನಂತರ ಗೋವಾದ ಪ್ರಪ್ರಥಮ ಮುಖ್ಯಮಂತ್ರಿಯಾಗಿದ್ದ ಇವರು ಅಧಿಕಾರದಲ್ಲಿರುವಾಗಲೇ ಆಗಸ್ಟ್ 12, 1973ರಲ್ಲಿ ನಿಧನರಾಗಿದ್ದರು. ಆಗ ಅವರಿಗೆ 62 ವರ್ಷ ವಯಸ್ಸಾಗಿತ್ತು.
8. ಬರ್ಕತುಲ್ಲಾ ಖಾನ್
ಕಾಂಗ್ರೆಸ್ ನಾಯಕರಾಗಿದ್ದ ಇವರು ಎರಡು ವರ್ಷಗಳ ಕಾಲ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. ಅವರು ಅಕ್ಟೋಬರ್ 11, 1973ರಂದು ಮೃತ ಪಟ್ಟಿದ್ದರು.
9. ಶೇಕ್ ಅಬ್ದುಲ್ಲಾ
ಶೇರ್-ಇ-ಕಾಶ್ಮೀರ್ ಎಂದು ಕರೆಯಲ್ಪಡುತ್ತಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ 1974ರ ಚುನಾವಣೆಯ ನಂತರ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗಿದ್ದು ಅವರು ಸೆಪ್ಟೆಂಬರ್ 1982ರಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿರುವಾಗಲೇ ಕೊನೆಯುಸಿರೆಳೆದಿದ್ದರು.
10. ಎಂ ಜಿ ರಾಮಚಂದ್ರನ್
ನಟ ಹಾಗೂ ರಾಜಕಾರಣಿಯಾಗಿದ್ದ ಎಂ ಜಿ ರಾಮಚಂದ್ರನ್ ಫೆಬ್ರವರಿ 10, 1985ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೂರನೇ ಸತತ ಬಾರಿಗೆ ಆಯ್ಕೆಯಾಗಿದ್ದರು. ಅವರು ಅನಾರೋಗ್ಯದಿಂದ ಡಿಸೆಂಬರ್ 24, 1987ರಂದು ಮೃತಪಟ್ಟಿದ್ದರು.
11. ಚಿಮನ್ ಭಾಯಿ ಪಟೇಲ್
ಗುಜರಾತ್ ಮುಖ್ಯಮಂತ್ರಿಯಾಗಿ 1973ರಲ್ಲಿ ಅಧಿಕಾರ ಸ್ವೀಕರಿಸಿದ್ದ ಇವರು 1990ರಲ್ಲಿ ಜನತಾದಳ-ಬಿಜೆಪಿ ಮೈತ್ರಿ ಕೂಟ ಸರಕಾರ ಅಧಿಕಾರಕ್ಕೆ ಬಂದಾಗ ಮತ್ತೆ ಮುಖ್ಯಮಂತ್ರಿಯಾಗಿದ್ದರು. ಆಧುನಿಕ ಗುಜರಾತ್ ರಾಜ್ಯದ ನಿರ್ಮಾತೃ ಎಂದು ಕರೆಯಲ್ಪಡುವ ಇವರು ಅಧಿಕಾರದಲ್ಲಿರುವಾಗಲೇ ಫೆಬ್ರವರಿ 17,1994ರಲ್ಲಿ ಮೃತ ಪಟ್ಟಿದ್ದರು.
12. ಬೀಯಂತ್ ಸಿಂಗ್
ಇವರು ಪಂಜಾಬ್ ಮುಖ್ಯಮಂತ್ರಿಯಾಗಿ 1993 ರಿಂದ 1995 ತನಕ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಖಲಿಸ್ತಾನ ಉಗ್ರವಾದಿಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಾಕಷ್ಟು ಶ್ರಮವಹಿಸಿದ್ದರೂ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆಯ ಆರೋಪಗಳು ಕೇಳಿ ಬಂದಿದ್ದವು. ಆತ್ಮಾಹುತಿ ಕಾರು ಬಾಂಬ್ ಸ್ಫೋಟವೊಂದಲ್ಲಿ ಅವರು ಆಗಸ್ಟ್ 31, 1995ರಂದು ಸಾವಿಗೀಡಾಗಿದ್ದರು.
13. ವೈ ಎಸ್ ರಾಜಶೇಖರ ರೆಡ್ಡಿ
ಆಂಧ್ರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ (2004ರಿಂದ 2009ರ ತನಕ) ಆಯ್ಕೆಯಾಗಿದ್ದ ರೆಡ್ಡಿ ತಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸೆಪ್ಟೆಂಬರ್ 2, 2009ರಂದು ಪತನಗೊಂಡು ಮೃತಪಟ್ಟಿದ್ದರು.
14. ದೋರ್ಜಿ ಖಂಡು
ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಎಪ್ರಿಲ್ 9, 2007ರಲ್ಲಿ ಅಧಿಕಾರ ಸ್ವೀಕರಿಸಿದ್ದ ಇವರು 2009ರಲ್ಲಿ ಮತ್ತೆ ಆಯ್ಕೆಯಾಗಿದ್ದರು. ತಮ್ಮ ಸಮಾಜ ಸೇವಾ ಕಾರ್ಯಗಳಿಗೆ ಹೆಸರಾಗಿದ್ದ ಖಂಡು ಎಪ್ರಿಲ್ 30, 2011 ರಲ್ಲಿ ಹೆಲಿಕಾಪ್ಟರ್ ಪತನವೊಂದರಲ್ಲಿ ಸಾವಿಗೀಡಾಗಿದ್ದರು.
15. ಮುಫ್ತಿ ಮೊಹಮ್ಮದ್ ಸಯೀದ್
ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಯ್ಕೆಯಾಗಿದ್ದ ಇವರು ಜನವರಿ 7, 2016ರಂದು ಅಂಗವೈಫಲ್ಯದಿಂದ ನಿಧನರಾಗಿದ್ದರು. ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಮುಫ್ತಿ ನಂತರ ವಿ.ಪಿ ಸಿಂಗ್ ಅವರ ಜನಮೋರ್ಚಾ ಸೇರಿ ಮುಂದೆ ಪಿಡಿಪಿ ಸ್ಥಾಪಿಸಿದ್ದರು