ಬಡ್ಡಿ ದರ ಕಡಿತ ಇಲ್ಲ : ಆರ್‌ಬಿಐ ಅಚ್ಚರಿಯ ನಡೆ
ಮುಂಬೈ, ಡಿ.7: ನೋಟು ಅಮಾನ್ಯದ ಬಳಿಕ ಆರ್ಥಿಕ ಚಟುವಟಿಕೆಗಳಲ್ಲಿ ಅಲ್ಪಾವಧಿಯ ತಡೆ ಮತ್ತು ಜಿಡಿಪಿ ಅಭಿವೃದ್ಧಿ ದರವನ್ನು ಶೇ.7.1ಕ್ಕೆ ಇಳಿಸಿದ ಬಳಿಕವೂ ಅಲ್ಪಾವಧಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರ ನಿರ್ಧಾರ ಮಾರುಕಟ್ಟೆಯನ್ನು ಅಚ್ಚರಿಯಲ್ಲಿ ಕೆಡವಿದೆ.
ಆರು ಮಂದಿ ಸದಸ್ಯರನ್ನು ಹೊಂದಿರುವ ಹಣಕಾಸು ನೀತಿ ಸಮಿತಿಯು ನಿರೀಕ್ಷೆಗಳನ್ನು ಹುಸಿಗೊಳಿಸಿ ರೆಪೋ ದರದಲ್ಲಿ ಬದಲಾವಣೆ ಮಾಡದೆ ಈಗಿರುವ ಶೇ. 6.25ಕ್ಕೇ ನಿಗದಿಗೊಳಿಸಿತು. ಕಳೆದ ಅಕ್ಟೋಬರ್‌ನಲ್ಲಿ ಈ ಸಮಿತಿ ನಡೆಸಿದ ಪ್ರಥಮ ಪರಾಮರ್ಶೆ ಸಭೆಯಲ್ಲಿ ಬಡ್ಡಿದರವನ್ನು ಶೇ.0.25ರಷ್ಟು ಕಡಿತಗೊಳಿಸಿತ್ತು. ನೋಟು ಅಮಾನ್ಯಗೊಳಿಸಿದ ಬಳಿಕ ಆರ್ಥಿಕ ಚಟುವಟಿಕೆಗಳಿಗೆ ತಡೆ ಉಂಟಾದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಜಿಡಿಪಿ ದರವನ್ನು ಶೇ.7.1 ಎಂದು ಅಂದಾಜಿಸಿತ್ತು.
2016-17ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ಪ್ರಮಾಣವನ್ನು ಶೇ.5 ಎಂದು ಅಂದಾಜಿಸಲಾಗಿದೆ. 7ನೇ ವೇತನ ಆಯೋಗವು ನೀಡಿರುವ ಮನೆ ಬಾಡಿಗೆ ಭತ್ಯೆಯ ಪೂರ್ಣ ಪರಿಣಾಮವನ್ನು ಇನ್ನಷ್ಟೇ ನಿಗದಿಪಡಿಸಬೇಕಿರುವ ಕಾರಣ ಹಣದುಬ್ಬರ ಪ್ರಮಾಣವನ್ನು ಅಂದಾಜಿಸುವ ಸಂದರ್ಭ ಪರಿಗಣಿಸಲಾಗಿಲ್ಲ. ಅಧಿಕ ವೌಲ್ಯದ ನೋಟುಗಳ ರದ್ದತಿಯಿಂದ ನವೆಂಬರ್- ಡಿಸೆಂಬರ್ ತಿಂಗಳ ಸಂಬಳ ಪಾವತಿ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಕಾರಣ ಆರ್ಥಿಕ ಚಟುವಟಿಕೆಗಳಿಗೆ ತಡೆ ಉಂಟಾಗಬಹುದು. ನಿರ್ಮಾಣ ಕಾಮಗಾರಿ, ವ್ಯಾಪಾರ, ಸಾರಿಗೆ, ಹೋಟೆಲ್ ಮತ್ತು ಮಾಹಿತಿ ಕ್ಷೇತ್ರಗಳ ಮೇಲೆ ತಾತ್ಕಾಲಿಕ ಪರಿಣಾಮ ಬೀರಲಿದೆ. 7 ನೇ ವೇತನ ಆಯೋಗದ ಶಿಫಾರಸು ಮತ್ತು ‘ಏಕ ಶ್ರೇಣಿ ಏಕ ಪಿಂಚಣಿ’ ಯೋಜನೆಯ ಕಾರಣ ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತಿತರ ಸೇವಾ ಕಾರ್ಯಗಳ ಮೇಲೆ ನೋಟು ರದ್ದತಿಯಿಂದ ಹೆಚ್ಚಿನ ಪರಿಣಾಮ ಆಗದು ಎಂದು ತಿಳಿಸಿದೆ.
14.5 ಲಕ್ಷ ಕೋಟಿಯಷ್ಟು ಹಳೆ ನೋಟುಗಳನ್ನು ರದ್ದುಪಡಿಸಲಾಗಿದ್ದು ಇದರಲ್ಲಿ 12 ಲಕ್ಷ ಕೋಟಿಯಷ್ಟು ಮೊತ್ತವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ನೋಟು ಅಮಾನ್ಯಗೊಳಿಸಿದ ಬಳಿಕ ಬ್ಯಾಂಕ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಠೇವಣಿಗಳು ಹರಿದು ಬರುತ್ತಿರುವ ಕಾರಣ ಶೇ.100 ನಗದು ಮೀಸಲು ಅನುಪಾತ (ಸಿಆರ್‌ಆರ್) ಅನ್ನು ಡಿ.10ರಿಂದ ಹಿಂಪಡೆಯಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಅಮೆರಿಕಾದಲ್ಲಿ ಆರ್ಥಿಕ ಕಾರ್ಯನೀತಿಯನ್ನು ಬಿಗುಗೊಳಿಸುವ ಸಮಯ ಸನ್ನಿಹಿತವಾಗಿರುವ ಕಾರಣ ಆರ್ಥಿಕ ಮಾರುಕಟ್ಟೆಯಲ್ಲಿ ಭಾರೀ ಚಂಚಲತೆ ನಿರೀಕ್ಷಿಸಲಾಗಿದೆ. ಇದರಿಂದ ಅಭಿವೃದ್ಧಿ ಹೊಂದುತ್ತಿರುವ ಮರುಕಟ್ಟೆಗಳ ಮೇಲೆ ಭಾರೀ ಆರ್ಥಿಕ ತೊಡಕು ಉಂಟಾಗುವ ಸಾಧ್ಯತೆಯಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಆದ್ದರಿಂದ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಮತ್ತು ಮಾರುಕಟ್ಟೆ ಪರಿಣಾಮಗಳನ್ನು ಕಾಯ್ದು ನೋಡುವ ಉದ್ದೇಶದಿಂದ ಬಡ್ಡಿ ದರವನ್ನು ಯಥಾಪ್ರಕಾರ ಉಳಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.