×
Ad

ಚಂಡಮಾರುತ: ಅಂಡಮಾನ್‌ನಲ್ಲಿ ಸಿಕ್ಕಿಹಾಕಿಕೊಂಡ 1,400 ಪ್ರವಾಸಿಗರು

Update: 2016-12-07 20:51 IST

ಪೋರ್ಟ್‌ಬ್ಲೇರ್, ಡಿ.7: ತೀವ್ರ ಚಂಡಮಾರುತದ ಕಾರಣ ಅಂಡಮಾನ್‌ನ ಹ್ಯಾವ್‌ಲಾಕ್ ಮತ್ತು ನೀಲ್ ದ್ವೀಪದಲ್ಲಿ ಸುಮಾರು 1,400ಕ್ಕೂ ಹೆಚ್ಚು ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದು , ಇವರನ್ನು ಸುರಕ್ಷಿತವಾಗಿ ಕರೆತರಲು ನೌಕಾಪಡೆಯ ನಾಲ್ಕು ಹಡಗುಗಳನ್ನು ನಿಯೋಜಿಸಲಾಗಿದೆ.
ಆದರೆ ಅಹಿತಕರ ಸನ್ನಿವೇಶದ ಕಾರಣ ಈ ಹಡಗುಗಳು ಕಾರ್ಯಾಚರಣೆ ಆರಂಭಿಸಲು ಅಸಾಧ್ಯವಾಗಿದೆ ಎಂದು ದಕ್ಷಿಣ ಅಂಡಮಾನ್‌ನ ಜಿಲ್ಲಾಧಿಕಾರಿ ಉದಿತ್ ಪ್ರಕಾಶ್ ರೈ ತಿಳಿಸಿದ್ದಾರೆ.

 ಪೋರ್ಟ್‌ಬ್ಲೇರ್‌ನಿಂದ ಸುಮಾರು 40 ಕಿ.ಮೀ. ದೂರದ ಈ ಎರಡು ದ್ವೀಪಗಳಲ್ಲಿ 10 ಗ್ರಾಮಗಳು ಚಂಡಮಾರುತದ ಅಬ್ಬರಕ್ಕೆ ನಲುಗಿದ್ದು ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯಾಗಿದೆ. ಬಂಗಾಳ ಕೊಲ್ಲಿಯ ಆಗ್ನೇಯದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತಕ್ಕೆ ಕಾರಣವಾಗಿದ್ದು ಭಾರೀ ಗಾಳಿ ಮಳೆಗೆ ಕಾರಣವಾಗಿದೆ.ಅಲ್ಲದೆ ಭಾರೀ ಗಾತ್ರದ ತೆರೆಗಳು ಸಮುದ್ರದಲ್ಲಿ ಕಾಣಿಸಿಕೊಂಡಿವೆ. ‘ಎಲ್ 1 ಡಿಸಾಸ್ಟರ್’ ಎಂದು ಚಂಡಮಾರುತಕ್ಕೆ ಹೆಸರಿಡಲಾಗಿದ್ದು , ಚಂಡಮಾರುತ ಕಾರಣ ಭಾರೀ ಗಾತ್ರದ ಮರಗಳು ಉರುಳಿಬಿದ್ದಿವೆ. ವಿದ್ಯುಚ್ಚಕ್ತಿ ಪೂರೈಕೆಗೆ ತೊಂದರೆಯಾಗಿದ್ದು ತಗ್ಗು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸಂಪರ್ಕ ವ್ಯವಸ್ಥೆ ಕಡಿದುಹೋಗಿದೆ.

ಲೆಫ್ಟಿನೆಂಟ್ ಗವರ್ನರ್ ಜಗದೀಶ್ ಮುಖಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಜನರಿಗೆ ನೆರವಾಗಲು ಸಂಘಟಿತ ಕ್ರಮ ಕೈಗೊಳ್ಳುವಂತೆ ಎಲ್ಲಾ ವಿಭಾಗಗಳಿಗೆ ಸೂಚನೆ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯು ಪೋರ್ಟ್‌ಬ್ಲೇರ್ ವಿಮಾನ ನಿಲ್ದಾಣ, ಹ್ಯಾವ್‌ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ‘ಹೆಲ್ಪ್ ಡೆಸ್ಕ್’ಗಳನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News