×
Ad

ಮುಂಬೈ ಟೆಸ್ಟ್‌ನಲ್ಲಿ ಶಮಿ ಆಡುವುದು ಅನುಮಾನ

Update: 2016-12-07 23:19 IST

 ಮುಂಬೈ, ಡಿ.7: ಮೊಹಾಲಿಯಲ್ಲಿ ನಡೆದ ಮೂರನೆ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿರುವ ಭಾರತದ ಪ್ರಮುಖ ವೇಗದ ಬೌಲರ್ ಮುಹಮ್ಮದ್ ಶಮಿ ಗುರುವಾರ ಮುಂಬೈನಲ್ಲಿ ಆರಂಭವಾಗಲಿರುವ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

 ಮಂಡಿನೋವಿನಿಂದ ಬಳಲುತ್ತಿರುವ ಶಮಿ ಅವರು ನಾಲ್ಕನೆ ಏಕದಿನ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಸಂಜೆ ಸೂಕ್ತ ನಿರ್ಧಾರಕ್ಕೆ ಬರಲಿದ್ದೇವೆ. ಮೊಹಾಲಿ ಟೆಸ್ಟ್‌ನ ಬಳಿಕ ಅವರಿಗೆ ಮಂಡಿನೋವು ಕಾಣಿಸಿಕೊಂಡಿದೆ. ಅವರು ಈ ಹಿಂದೆಯೂ ಮಂಡಿನೋವಿನಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಅವರನ್ನು ಆಡಿಸುವ ಮೂಲಕ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲ. ಈ ಬಗ್ಗೆ ನಿರ್ಧರಿಸಲು ನಮಗೆ ಹೆಚ್ಚು ಸಮಯಾವಕಾಶವೂ ಇಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

  ಈ ವರ್ಷ ಶಮಿ ಭಾರತದ 2ನೆ ಅತ್ಯುತ್ತಮ ಬೌಲರ್ ಆಗಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ 10 ವಿಕೆಟ್ ಸಹಿತ 3 ಟೆಸ್ಟ್ ಸರಣಿಗಳಲ್ಲಿ ಒಟ್ಟು 29 ವಿಕೆಟ್‌ಗಳನ್ನು ಪಡೆದಿದ್ದಾರೆ.

ಶಮಿ ಹಾಗೂ ಉಮೇಶ್ ಯಾದವ್ ಹೊಸ ಹಾಗೂ ಹಳೆಯ ಚೆಂಡಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮಂಗಳವಾರ ಶ್ಲಾಘಿಸಿದ್ದರು.

ಒಂದು ವೇಳೆ ಶಮಿ ನಾಲ್ಕನೆ ಪಂದ್ಯದಿಂದ ಹೊರಗುಳಿದರೆ ಉತ್ತರಪ್ರದೇಶದ ವೇಗದ ಬೌಲರ್ ಭುವನೇಶ್ವರ ಕುಮಾರ್ ಆಡುವ 11ರ ಬಳಗಕ್ಕೆ ವಾಪಸಾಗಲಿದ್ದಾರೆ. ಭುವಿ ಅಕ್ಟೋಬರ್ ಆಡಿದ್ದ ತನ್ನ ಕೊನೆಯ ಪಂದ್ಯದಲ್ಲಿ ಕಿವೀಸ್ ವಿರುದ್ಧ 5 ವಿಕೆಟ್ ಗೊಂಚಲು ಪಡೆದಿದ್ದರು.

ರಾಹುಲ್ ಸಂಪೂರ್ಣ ಫಿಟ್ ಆಗಿದ್ದಾರೆ. ರಾಹುಲ್ ಹಾಗೂ ಸ್ಪೆಷಲಿಸ್ಟ್ ಓಪನರ್ ಮುರಳಿವಿಜಯ್ ಇನಿಂಗ್ಸ್ ಆರಂಭಿಸಲಿದ್ದಾರೆ. ಪಾರ್ಥಿವ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News