×
Ad

ಆತಿಥೇಯ ಭಾರತಕ್ಕೆ ಕೆನಡಾ ಮೊದಲ ಎದುರಾಳಿ

Update: 2016-12-07 23:23 IST

ಲಕ್ನೋ, ಡಿ.7:ಹನ್ನೊಂದನೆ ಆವೃತ್ತಿಯ ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿ ಗುರುವಾರ ಇಲ್ಲಿ ಆರಂಭವಾಗಲಿದೆ. ಆತಿಥೇಯ ಭಾರತೀಯ ಹಾಕಿ ತಂಡ 15 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಳ್ಳುವ ಗುರಿ ಹಾಕಿಕೊಂಡಿದ್ದು, ತನ್ನ ಮೊದಲ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ.

ಭಾರತ ತಂಡ ಆಸ್ಟ್ರೇಲಿಯದ ಹೊಬರ್ಟ್‌ನಲ್ಲಿ 2001ರಲ್ಲಿ ಕೊನೆಯ ಬಾರಿ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನ್ನು ಜಯಿಸಿತ್ತು.

ಭಾರತ ಸತತ ಎರಡನೆ ಬಾರಿ ಪುರುಷರ ಜೂನಿಯರ್ ವಿಶ್ವಕಪ್‌ನ್ನು ಆಯೋಜಿಸುತ್ತಿದೆ. ಭಾರತದಲ್ಲಿ ಸತತ ಎರಡನೆ ಬಾರಿ ಈ ಟೂರ್ನಿ ನಡೆಯುತ್ತಿದೆ. ಕಳೆದ ಆವೃತ್ತಿಯ ಟೂರ್ನಿಯು 2013ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿತ್ತು. ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು 5-2 ಅಂತರದಿಂದ ಮಣಿಸಿದ್ದ ಜರ್ಮನಿ ತಂಡ ಆರನೆ ಪ್ರಶಸ್ತಿಯನ್ನು ಜಯಿಸಿತ್ತು.

ಈ ಬಾರಿ ಒಟ್ಟು 16 ತಂಡಗಳು ನಾಲ್ಕು ಗುಂಪುಗಳಲ್ಲಿ ಆಡಲಿವೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳು ಇರುತ್ತವೆ. ಡಿ ಗುಂಪಿನಲ್ಲಿರುವ ಭಾರತ ತಂಡ ಕೆನಡಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕ ತಂಡದೊಂದಿಗೆ ಸ್ಥಾನ ಪಡೆದಿದೆ.

ಆತಿಥೇಯ ತಂಡ ಭಾರತ ಗ್ರೂಪ್ ಹಂತದಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆದರೆ ಸಿ ಗುಂಪಿನಲ್ಲಿ ಅಗ್ರ-2ರಲ್ಲಿರುವ ಒಂದು ತಂಡವನ್ನು ಎದುರಿಸಲಿದೆ. ಸಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಜರ್ಮನಿ, ನ್ಯೂಝಿಲೆಂಡ್ ಹಾಗೂ ಸ್ಪೇನ್ ತಂಡಗಳಿವೆ.

ಭಾರತ 2001ರಲ್ಲಿ ವಿಶ್ವಕಪ್‌ನ್ನು ಗೆದ್ದುಕೊಂಡ ಬಳಿಕ 1997ರ ಆವೃತ್ತಿಯಲ್ಲಿ ರನ್ನರ್‌ಅಪ್ ಪ್ರಶಸ್ತಿ ಜಯಿಸಿತ್ತು. ಭಾರತ ಈ ಬಾರಿ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ. ತಂಡದಲ್ಲಿ ನಾಯಕ ಹರ್ಜೀತ್ ಸಿಂಗ್, ಸ್ಟ್ರೈಕರ್ ಮನ್‌ದೀಪ್ ಸಿಂಗ್, ಡಿಫೆಂಡರ್ ಹಾಗೂ ಡ್ರಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಗೋಲ್‌ಕೀಪರ್ ವಿಕಾಸ್ ದಹಿಯಾ ಅವರಿದ್ದಾರೆ.

ಹರೇಂದ್ರ ಸಿಂಗ್ ಮಾರ್ಗದರ್ಶನದಲ್ಲಿ ಭಾರತ ತಂಡ ಅಕ್ಟೋಬರ್‌ನಲ್ಲಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ನಾಲ್ಕು ರಾಷ್ಟ್ರಗಳನ್ನೊಳಗೊಂಡ ಆಹ್ವಾನಿತ ಹಾಕಿ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆ ಟೂರ್ನಿಯಲ್ಲಿ ಭಾರತ ತಂಡ ಜರ್ಮನಿ, ಬೆಲ್ಜಿಯಂ ಹಾಗೂ ಸ್ಪೇನ್ ತಂಡವನ್ನು ಮಣಿಸಿತ್ತು.

ಡಿಫೆಂಡರ್ ಹಾಗೂ ಡ್ರಾಗ್‌ಫ್ಲಿಕರ್ ಸ್ಪೆಷಲಿಸ್ಟ್ ವರುಣ್ ಕುಮಾರ್ ಹಾಗೂ ಭರವಸೆಯ ಸ್ಟ್ರೈಕರ್ ಅರ್ಮಾನ್ ಖುರೇಶಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಇಬ್ಬರು ಜರ್ಮನಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೋಲು ಬಾರಿಸಿ 5-2 ಅಂತರದ ಗೆಲುವು ತಂದುಕೊಟ್ಟಿದ್ದರು.

ಭಾರತ ವಿಶ್ವಕಪ್ ಸ್ಪರ್ಧೆಯಲ್ಲಿರುವ ಅತ್ಯಂತ ಅನುಭವಿ ಹಾಗೂ ಸಮತೋಲಿತ ತಂಡವಾಗಿದೆ. ಹೆಚ್ಚಿನ ಆಟಗಾರರಿಗೆ ಕಳೆದ 3 ಆವೃತ್ತಿಯ ಹಾಕಿ ಇಂಡಿಯಾ ಲೀಗ್‌ನಲ್ಲಿ ವಿಶ್ವಶ್ರೇಷ್ಠ ಆಟಗಾರರೊಂದಿಗೆ ಆಡಿದ ಅನುಭವವಿದೆ. ವಿಶ್ವಕಪ್ ತಯಾರಿಗೆ ಹಿರಿಯರ ಹಾಕಿ ತಂಡದ ಕೋಚ್ ರೊಲ್ಯಾಂಟ್ ಒಲ್ಟಮನ್ಸ್ ನೆರವು ನೀಡಿದ್ದಾರೆ.

ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವುದು ಭಾರತದ ಮುಖ್ಯ ಗುರಿಯಾಗಿದೆ. ಕೆನಡಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಅರಂಭಿಸಲಿರುವ ಭಾರತ ತಂಡ ಡಿ.10 ರಂದು ಇಂಗ್ಲೆಂಡ್ ಹಾಗೂ ಡಿ.12 ರಂದು ದಕ್ಷಿಣ ಆಫ್ರಿಕ ವಿರುದ್ಧ ಆಡಲಿದೆ.

ನವಾಬರ ನಗರ ಲಕ್ನೋ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಟೂರ್ನಿಯನ್ನು ಆಯೋಜಿಸುತ್ತಿದೆ. ಟೂರ್ನಿಯು ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಮೇಜರ್ ಧ್ಯಾನ್‌ಚಂದ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ತಂಡ ಹಾಕಿ ಅಭಿಮಾನಿಗಳಿಂದ ಉತ್ತಮ ಬೆಂಬಲದ ನಿರೀಕ್ಷೆಯಲ್ಲಿದೆ. ಆದರೆ, ಕೊನೆಯ ಕ್ಷಣದಲ್ಲಿ ಪಾಕಿಸ್ತಾನ ಹಾಕಿ ತಂಡ ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ಟೂರ್ನಿಯಲ್ಲಿ ಸ್ವಲ್ಪ ಆಕರ್ಷಣೆ ಕಡಿಮೆಯಾಗಿದೆ.

ಟೂರ್ನಿ ಆರಂಭವಾಗಲು ಕೆಲವೇ ದಿನಗಳಿರುವಾಗ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಪಾಕಿಸ್ತಾನ ತಂಡ ಟೂರ್ನಿಯಿಂದ ಹಿಂದೆ ಸರಿದಿರುವುದಾಗಿ ಪ್ರಕಟಿಸಿತ್ತು. ಪಾಕಿಸ್ತಾನದ ಹಾಕಿ ಫೆಡರೇಶನ್ ವೀಸಾ ಪಡೆಯಲು ವಿಳಂಬ ನೀತಿ ಅನುಸರಿಸಿತ್ತು ಎಂದು ಎಫ್‌ಐಎಚ್ ಆರೋಪಿಸಿತ್ತು. ಎಫ್‌ಐಎಚ್ ಪಾಕಿಸ್ತಾನದ ಬದಲಿಗೆ ಮಲೇಷ್ಯಾವನ್ನು ಟೂರ್ನಿಗೆ ಆಹ್ವಾನಿಸಿತ್ತು.

ಎ ಗುಂಪು: ಅರ್ಜೆಂಟೀನ(2005ರ ವಿನ್ನರ್), ಆಸ್ಟ್ರೇಲಿಯ(1997ರ ವಿನ್ನರ್), ಆಸ್ಟ್ರೀಯ(ಚೊಚ್ಚಲ ಪ್ರವೇಶ), ಕೊರಿಯಾ(1989ರಲ್ಲಿ 4ನೆ ಸ್ಥಾನ)

ಬಿ ಗುಂಪು: ಹಾಲೆಂಡ್(ರನ್ನರ್ಸ್‌-ಅಪ್, 1985, 2009),ಮಲೇಷ್ಯಾ(1979, 1983, 2013ರಲ್ಲಿ 4ನೆ ಸ್ಥಾನ)ಬೆಲ್ಜಿಯಂ(2013ರಲ್ಲಿ 6ನೆ ಸ್ಥಾನ), ಈಜಿಪ್ಟ್(1997ರಲ್ಲಿ 9ನೆ)

ಸಿ ಗುಂಪು: ಜರ್ಮನಿ(1983, 1985, 1989, 1993, 2009, 2013ರಲ್ಲಿ ವಿನ್ನರ್), ಸ್ಪೇನ್(2005ರಲ್ಲಿ 3ನೆ ಸ್ಥಾನ), ನ್ಯೂಝಿಲೆಂಡ್(2009ರಲ್ಲಿ 4ನೆ ಸ್ಥಾನ), ಜಪಾನ್(1997ರಲ್ಲಿ 11ನೆ)

ಡಿ ಗುಂಪು: ಭಾರತ(2001ರಲ್ಲಿ ವಿನ್ನರ್, 1997ರಲ್ಲಿ ರನ್ನರ್ಸ್‌-ಅಪ್), ಇಂಗ್ಲೆಂಡ್(1997, 2001ರಲ್ಲಿ 4ನೆ ಸ್ಥಾನ), ಕೆನಡಾ(1983ರಲ್ಲಿ 8ನೆ ಸ್ಥಾನ), ದಕ್ಷಿಣ ಆಫ್ರಿಕ(2001ರಲ್ಲಿ 11ನೆ ಸ್ಥಾನ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News