×
Ad

ರಣಜಿ ಟ್ರೋಫಿ: ವಿನಯ್ ಮಾರಕ ದಾಳಿಗೆ ಮಹಾರಾಷ್ಟ್ರ ನಿರುತ್ತರ

Update: 2016-12-07 23:30 IST

ಮೊಹಾಲಿ, ಡಿ.7: ವೇಗದ ಬೌಲರ್ ವಿನಯಕುಮಾರ್ ದಾಳಿಗೆ ಸಿಲುಕಿದ ಮಹಾರಾಷ್ಟ್ರ ತಂಡ ಕರ್ನಾಟಕ ವಿರುದ್ಧ ಗುರುವಾರ ಇಲ್ಲಿ ಆರಂಭವಾದ 9ನೆ ಸುತ್ತಿನ ರಣಜಿ ಟ್ರೋಫಿಯ ಮೊದಲ ದಿನವೇ 163 ರನ್‌ಗೆ ಆಲೌಟಾಗಿದೆ.

ಈ ಋತುವಿನಲ್ಲಿ 3ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದ ವಿನಯ್ ಒಟ್ಟು 351 ವಿಕೆಟ್ ಪಡೆದು ರಣಜಿ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡರು. ಮದನ್‌ಲಾಲ್ ದಾಖಲೆ ಮುರಿದರು.

ನಿರ್ಣಾಯಕ ಸುತ್ತಿನ ಮೊದಲ ದಿನದಾಟದಲ್ಲಿ ಇಲ್ಲಿನ ಪಿಸಿಬಿ ಸ್ಟೇಡಿಯಂನಲ್ಲಿ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಮಹಾರಾಷ್ಟ್ರಕ್ಕೆ ಆರಂಭಿಕ ಆಟಗಾರರಾದ ಸ್ವಪ್ನಿಲ್ ಗುಗಾಲೆ ಹಾಗೂ ರೋಹಿತ್ ಮೊಟ್ವಾನಿ ಮೊದಲ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭವನ್ನೇ ನೀಡಿದ್ದರು. ಆದರೆ, ಸ್ವಪ್ನಿಲ್ ಔಟಾದ ಬೆನ್ನಿಗೆ ಮಹಾರಾಷ್ಟ್ರದ ಬ್ಯಾಟಿಂಗ್ ಕುಸಿತದ ಹಾದಿ ಹಿಡಿಯಿತು.

 ರೋಹಿತ್ ಮತ್ತೊಂದು ತುದಿಯಲ್ಲಿ ನಿಂತು ವಿಕೆಟ್ ಪತನಗೊಳ್ಳುವುದನ್ನು ನೋಡುತ್ತಾ ನಿಲ್ಲಬೇಕಾಯಿತು. ಮಧ್ಯಮ ಕ್ರಮಾಂಕದಲ್ಲಿ ಚಿರಾಗ್ ಖುರಾನ(16),ಅನುಪಮ್ ಸಕ್ಲೇಚಾ(13) ಹಾಗೂ ಮೊಹ್ಸಿನ್ ಸೈಯದ್(12) ಹೊರತುಪಡಿಸಿ ಉಳಿದವರು ಎರಡಂಕೆ ಸ್ಕೋರ್ ದಾಖಲಿಸಲು ವಿಫಲರಾದರು.

8ನೆ ವಿಕೆಟ್‌ಗೆ 29 ರನ್ ಜೊತೆಯಾಟ ನಡೆಸಿದ ಅನುಪಮ್ ಸಕ್ಲೇಚಾ ಹಾಗೂ ಮೊಹ್ಸಿನ್ ಸೈಯದ್ ಗೆಲ್ಲಲೇಬೇಕಾದ ಪಂದ್ಯದಲ್ಲಿ ತಂಡ 163 ರನ್ ಗಳಿಸಲು ನೆರವಾದರು.

ನಾಯಕ ವಿನಯ್ ಕುಮಾರ್(5-46) ಐದು ವಿಕೆಟ್ ಗೊಂಚಲು ಪಡೆದರು. ತಲಾ 2 ವಿಕೆಟ್‌ಗಳನ್ನು ಪಡೆದ ಎಸ್. ಅರವಿಂದ್(2-32)ಹಾಗೂ ಸ್ಟುವರ್ಟ್ ಬಿನ್ನಿ 2-40) ನಾಯಕನಿಗೆ ಉತ್ತಮ ಸಾಥ್ ನೀಡಿದರು.

ಕರ್ನಾಟಕ 67/1: ಮಹಾರಾಷ್ಟ್ರದ ಮೊದಲ ಇನಿಂಗ್ಸ್‌ಗೆ ಉತ್ತರಿಸಹೊರಟಿರುವ ಕರ್ನಾಟಕ ತಂಡ ಮೊದಲ ದಿನದಾಟದಂತ್ಯಕ್ಕೆ 19 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. ಚೊಚ್ಚಲ ಪಂದ್ಯ ಆಡಿರುವ ಅರ್ಜುನ್ ಹೊಯ್ಸಳ(0) ಖಾತೆ ತೆರೆಯಲು ವಿಫಲರಾದರು.

2ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 66 ರನ್ ಸೇರಿಸಿದ ಆರ್.ಸಮರ್ಥ್ ಹಾಗೂ ಎಂಕೆ ಅಬ್ಬಾಸ್ ತಂಡ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಲು ನೆರವಾದರು.

ಕರ್ನಾಟಕದ ಅಂತಿಮ 11ರ ಬಳಗದಲ್ಲಿ ಆಯ್ಕೆಯಾಗಿದ್ದ ಮನೀಷ್ ಪಾಂಡೆ ಭಾರತೀಯ ತಂಡದಲ್ಲಿ ಸೇರ್ಪಡೆಯಾಗಲು ಕರೆ ಬಂದ ಕಾರಣ ಮುಂಬೈಗೆ ತೆರಳಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಮಹಾರಾಷ್ಟ್ರ ಪ್ರಥಮ ಇನಿಂಗ್ಸ್:

56 ಓವರ್‌ಗಳಲ್ಲಿ 163/10

(ರೋಹಿತ್ ಮೊಟ್ವಾನಿ 32, ಸ್ವಪ್ನಿಲ್ ಗುಗಾಲೆ 25, ವಿನಯಕುಮಾರ್ 5-46, ಎಸ್.ಅರವಿಂದ್ 2-32, ಬಿನ್ನಿ 2-40)

ಕರ್ನಾಟಕ ಪ್ರಥಮ ಇನಿಂಗ್ಸ್: 19 ಓವರ್‌ಗಳಲ್ಲಿ 67/1

(ಆರ್. ಸಮರ್ಥ್ ಅಜೇಯ 33, ಕೆ. ಅಬ್ಬಾಸ್ ಅಜೇಯ 30, ಅನುಪಮ್ 1-24)

ಒಂದೇ ದಿನ 18 ವಿಕೆಟ್‌ಗಳ ಪತನ

ವಡೋದರ, ಡಿ.7: ದಿಲ್ಲಿ ಹಾಗೂ ಸೌರಾಷ್ಟ್ರದ ನಡುವೆ ಇಲ್ಲಿನ ರಿಲಯನ್ಸ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನದಾಟದಲ್ಲಿ 18 ವಿಕೆಟ್‌ಗಳು ಪತನಗೊಂಡಿವೆ.

ಟಾಸ್ ಜಯಿಸಿದ ದಿಲ್ಲಿ ನಾಯಕ ಗೌತಮ್ ಗಂಭೀರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಸಂಘಟಿತ ಪ್ರದರ್ಶನ ನೀಡಿದ ಪ್ರದೀಪ್ ಸಾಂಗ್ವಾನ್(4-25) ಹಾಗೂ ಸುಮಿತ್ ನರ್ವಾಲ್(4-27) ಸೌರಾಷ್ಟ್ರ ತಂಡವನ್ನು ಕೇವಲ 92 ರನ್‌ಗೆ ಆಲೌಟ್ ಮಾಡಿದರು.

ದಿಲ್ಲಿಯ ಆರಂಭವೂ ಕಳಪೆಯಾಗಿತ್ತು. ಆದರೆ, ರಿಷಬ್ ಪಂತ್(28 ರನ್),ಪ್ರದೀಪ್ ಸಾಂಗ್ವಾನ್(ಅಜೇಯ 39) ಹಾಗೂ ಮನನ್ ಶರ್ಮ(33) ದಿಲ್ಲಿ ತಂಡ 8 ವಿಕೆಟ್‌ನಷ್ಟಕ್ಕೆ 194 ರನ್‌ಗಳಿಸಲು ನೆರವಾದರು. ದಿನದಾಟದಂತ್ಯಕ್ಕೆ ದಿಲ್ಲಿ 102 ರನ್ ಮುನ್ನಡೆಯಲ್ಲಿದೆ.

ಸೌರಾಷ್ಟ್ರದ ಪರ ಕುಶಾಂಗ್ ಪಟೇಲ್(4-59) ಹಾಗೂ ಶೌರ್ಯ(2-51) 6 ವಿಕೆಟ್‌ಗಳನ್ನು ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್

ಸೌರಾಷ್ಟ ಮೊದಲ ಇನಿಂಗ್ಸ್: 92 ರನ್‌ಗೆ ಆಲೌಟ್(ಪ್ರೇರಕ್ 33, ಸ್ನೇಲ್ ಪಟೇಲ್ 26, ಪ್ರದೀಪ್ 4-25, ಸುಮಿತ್ 4-27)

ದಿಲ್ಲಿ ಮೊದಲ ಇನಿಂಗ್ಸ್: 194/8(ರಿಷಬ್ ಪಂತ್ 40, ಪ್ರದೀಪ್ ಅಜೇಯ 39, ಕುಶಾಂಗ್ ಪಟೇಲ್ 4-59, ಶೌರ್ಯ 2-51)

ಪಾಂಚಾಲ್ ಶತಕ, ಗುಜರಾತ್ 267/7

ಬೆಳಗಾವಿ, ಡಿ.7: ಪ್ರಿಯಾಂಕ್ ಪಾಂಚಾಲ್ ಆಕರ್ಷಕ ಶತಕದ(180 ಎಸೆತ, 133 ರನ್) ನೆರವಿನಿಂದ ಗುಜರಾತ್ ತಂಡ ತಮಿಳುನಾಡಿನ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ 7 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿದೆ.

26ರ ಹರೆಯದ ಪಾಂಚಾಲ್ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು 17 ಬೌಂಡರಿ ಬಾರಿಸಿದರು. ಮನ್‌ಪ್ರೀತ್ ಜುನೇಜ(25), ಧ್ರುವ್ ರಾವಲ್(35) ಹಾಗೂ ಸಮಿತ್ ಗೊಹೆಲ್(23) ಉಪಯುಕ್ತ ಕೊಡುಗೆ ನೀಡಿದರು.

ಆಟ ಕೊನೆಗೊಳ್ಳಲು ಅರ್ಧಗಂಟೆ ಬಾಕಿ ಇರುವಾಗ ರಾವಲ್ ಹಾಗೂ ರಶ್ ಕಲಾರಿಯ ವಿಕೆಟ್‌ನ್ನು ಬಾಬಾ ಅಪರಾಜಿತ್(2-29) ಕಬಳಿಸಿದರು. ಮೊದಲ ದಿನದಾಟದಲ್ಲಿ ಉಭಯ ತಂಡಗಳು ಸಮಾನ ಗೌರವಕ್ಕೆ ಪಾತ್ರವಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News