ಮುಕ್ತಿ ಕಾಣದ ಅಕ್ರಮ-ಸಕ್ರಮದ ‘94 ಸಿ ಮತ್ತು 94 ಸಿಸಿ’ ಯೋಜನೆ

Update: 2016-12-07 18:29 GMT

=ದ.ಕ.ಜಿಲ್ಲೆಯಲ್ಲಿ 1ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ

=ಸಕ್ರಮದ ನಿರೀಕ್ಷೆಯಲ್ಲಿ ಅಕ್ರಮ ನಿವಾಸಿಗಳು

ಮಂಗಳೂರು, ಡಿ.7: ವಿವಿಧ ಭಾಗ್ಯಗಳನ್ನು ಕರುಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ 2012ರ ಜ.1ರ ಮೊದಲು ಅಂದರೆ, 2011ರ ಡಿಸೆಂಬರ್ 31ರೊಳಗೆ ನಗರ ಮತ್ತು ಗ್ರಾಮಾಂತರ ಪ್ರದೇಶದ ಸರಕಾರಿ ಸ್ಥಳವನ್ನು ಅತಿಕ್ರಮಿಸಿ ಕಟ್ಟಲ್ಪಟ್ಟ ಮನೆಗಳ ಸಕ್ರಮಕ್ಕೆ ಜಾರಿಗೊಳಿಸಿದ ‘94 ಸಿ (ಗ್ರಾಮಾಂತರ) ಮತ್ತು 94 ಸಿಸಿ’ (ನಗರ) ಯೋಜನೆಯಡಿಯ ಅರ್ಜಿಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡೂ ಯೋಜನೆಯಡಿ ಸುಮಾರು 1 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಇದು ರಾಜ್ಯದಲ್ಲೇ ಅತ್ಯಧಿಕ ಎಂದು ಹೇಳಲಾಗುತ್ತಿವೆ. ಆದರೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಅರ್ಧಕ್ಕರ್ಧ ಅರ್ಜಿಗಳ ವಿಲೇವಾರಿ ಇನ್ನೂ ಆಗಿಲ್ಲ. ಅಕ್ರಮವಾಸಿಗಳು ತಮ್ಮ ವಾಸದ ಮನೆಗಳ ಸಕ್ರಮಕ್ಕಾಗಿ ಬಕಪಕ್ಷಿಯಂತೆ ಕಾದು ಕುಳಿತಿದ್ದಾರೆ. ಇದಕ್ಕೆ ಹಿರಿಯ ಅಧಿಕಾರಿಗಳ ಎಡವಟ್ಟು ಕಾರಣ ಎಂಬ ಆರೋಪ ಕೇಳಿಬರುತ್ತಿವೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಈ ಯೋಜನೆಯನ್ನು ಮಹತ್ವಾಕಾಂಕ್ಷಿ ಯೋಜನೆ ಎಂದು ಬಿಂಬಿಸಲು ಪ್ರಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಜನಮಾನಸದಲ್ಲಿ ಈ ಯೋಜನೆ ಅಚ್ಚೊತ್ತಿ ನಿಲ್ಲಬೇಕು ಎಂದು ಆಶಿಸುತ್ತಿದ್ದಾರೆ. ಆದರೆ, ಅದಕ್ಕೆ ಅಧಿಕಾರಿಗಳಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ.

 ಸರಕಾರಿ ಜಮೀನಿನಲ್ಲಿ ಅನಧಿಕೃತಾಗಿ ನಿರ್ಮಿಸಿದ ವಾಸದ ಮನೆಗಳನ್ನು ಸಕ್ರಮಗೊಳಿಸುವ ರಾಜ್ಯ ಸರಕಾರದ ಮಹತ್ತರ ಯೋಜನೆ ಇದಾಗಿದೆ. ಭೂಕಂದಾಯ ಕಾಯ್ದೆ ಕಲಂ ‘94 ಸಿ’ಯಡಿ ಮನೆ ಕಟ್ಟಿಸಿದ 4 ಸಾವಿರ ಚ.ಅ.ಯಷ್ಟು ಸ್ಥಳವನ್ನು ಸಕ್ರಮಗೊಳಿಸಲು ಅವಕಾಶವಿದೆ. ನಗರ ಪ್ರದೇಶದಲ್ಲಿ ಇದು ಕೇವಲ ಒಂದೂವರೆ ಸೆಂಟ್ಸ್‌ಗೆಸೀಮಿತವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಆರಂಭದಲ್ಲಿ 5 ಸೆಂಟ್ಸ್ ಸ್ಥಳ ಮತ್ತು ಆ ಬಳಿಕ 9 ಸೆಂಟ್ಸ್ ಸ್ಥಳವನ್ನು ಸಕ್ರಮಗೊಳಿಸಲಾಗುತ್ತಿವೆ ಎಂದು ಹೇಳಲಾಗುತ್ತಿತ್ತು. ಈ ಮಧ್ಯೆ ಕೇವಲ ಮನೆಯ ಅಡಿಸ್ಥಳ ಮಾತ್ರ ಸಕ್ರಮಗೊಳಿಸಲಾಗುತ್ತಿದೆ ಎಂಬ ಮಾತೂ ಕೇಳಿ ಬಂದಿವೆ.

2011ರ ಡಿ.31ರೊಳಗೆ ಮನೆ ಕಟ್ಟಿದವರು ಸೂಕ್ತ ದಾಖಲೆಯೊಂದಿಗೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗಿತ್ತು. 2013ರ ಡಿಸೆಂಬರ್ ತಿಂಗಳಲ್ಲಿ ಈ ಬಗ್ಗೆ ಆದೇಶ ಹೊರಡಿಸಿ 2 ವರ್ಷದಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಅಂದರೆ 2015ಕ್ಕೆ ಎಲ್ಲವೂ ಮುಗಿಯಬೇಕಿತ್ತು. ಆದರೆ 2016ನೆ ವರ್ಷ ಕೊನೆಯಾಗುತ್ತಾ ಬಂದರೂ ಸಲ್ಲಿಕೆಯಾದ ಅರ್ಜಿಗಳಿಗೆ ಭಾಗಶ: ಮುಕ್ತಿ ಸಿಕ್ಕಿಲ್ಲ. ಇದಕ್ಕೆ ಹಿರಿಯ ಅಧಿಕಾರಿಗಳ ಎಡವಟ್ಟು ಮತ್ತು ಕಿರಿಯ ಅಧಿಕಾರಿಗಳ ನಿರ್ಲಕ್ಷವೂ ಕಾರಣ ಎಂದು ಹೇಳಲಾಗುತ್ತಿದೆ. ಈ ಯೋಜನೆ ಘೋಷಣೆಯಾದ ತಕ್ಷಣ ಜಿಲ್ಲೆಯ ಬಹುತೇಕ ಮಂದಿ ಅರ್ಜಿ ಸಲ್ಲಿಸತೊಡಗಿದ್ದರು. 2012-13ರಲ್ಲಿ ಮನೆ ಕಟ್ಟಿದವರು ಕೂಡ 2011ರ ಡಿಸೆಂಬರ್‌ಗಿಂತ ಮನೆ ಕಟ್ಟಲಾಗಿದೆ ಎಂದು ಬಿಂಬಿಸುವ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿದ್ದರು. ಒಟ್ಟಾರೆ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ ಕೆಲವು ಅರ್ಜಿಗಳು ಮಾತ್ರ ವಿಲೇ ಆಗಿದ್ದರೆ ಉಳಿದ ಬಹುತೇಕ ಕಡತಗಳು ಕೊಳೆಯುತ್ತಿವೆ.

*ಹೊಸ ಆದೇಶ: ಅಂದಹಾಗೆ, 2013ರ ಜು.11ರ ಗಜೆಟ್ ೋಟಿಫಿಕೇಶನ್ ಹೊರಡಿಸಿದ ಸರಕಾರ ಪಪಂ, ಪುರಸಭೆ, ನಗರಸಭೆಗಳ ಗಡಿಯಿಂದ 3 ಕಿ.ಮೀ. ವ್ಯಾಪ್ತಿಯ ಅನಧಿಕೃತ ಕಟ್ಟಡಗಳನ್ನು ‘94 ಸಿ’ ಯಡಿ ಸಕ್ರಮಗೊಳಿಸುವಂತಿಲ್ಲ. ಅ

ನ್ನು ‘94 ಸಿಸಿ’ಯಡಿ ಸಕ್ರಮಗೊಳಿಸಲು ಆದೇಶಿಸಿತ್ತು. ಇದರಿಂದ ‘94 ಸಿ’ಯಡಿ ಅರ್ಜಿ ಸಲ್ಲಿಸಿದ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಮತ್ತೆ ‘94 ಸಿ’ಯಡಿ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿತ್ತು. ಇದು ಅರ್ಜಿದಾರರಿಗೆ ಸಮಯ, ಹಣ ವ್ಯಯವಷ್ಟೇ ಅಲ್ಲ, ಸಹನೆಯ ಪ್ರಶ್ನೆಯಾಗಿಯೂ ಪರಿಣಮಿಸಿತ್ತು. ಕೆಲವು ಅರ್ಜಿದಾರರು ಮತ್ತೆ ಕೆಲಸಗಳಿಗೆ ರಜೆ ಹಾಕಿ ಅರ್ಜಿ ಸಲ್ಲಿಸಿದರೆ ಇನ್ನು ಕೆಲವರು ಗ್ರಾಪಂ ಸದಸ್ಯರ, ಅಧ್ಯಕ್ಷರ, ಪಿಡಿಒ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡದ್ದೂ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಗಡಿಯಿಂದ 18ಕಿ.ಮೀ. ದೂರ, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು ಮಹಾನಗರ ಪಾಲಿಕೆಯ ಗಡಿಯಿಂದ 10 ಕಿ.ಮೀ. ದೂರ ಹಾಗೂ ಇತರ ಸ್ಥಳೀಯಾಡಳಿತದ ವ್ಯಾಪ್ತಿಯ ಗಡಿಯಿಂದ 5 ಕಿ.ಮೀ. ದೂರದ ಪ್ರದೇಶದ ಜನರು ‘94 ಸಿ’ಯಡಿ ಅರ್ಜಿ ಸಲ್ಲಿಸಿದ್ದರೂ ಮತ್ತೆ ‘94 ಸಿಸಿ’ಯಡಿ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿತ್ತು. ಅದರಂತೆ ಹಲವರು ಮತ್ತೆ ಅರ್ಜಿ ಸಲ್ಲಿಸಿ ‘ಸಕ್ರಮ’ಕ್ಕೆ ಕಾಯುವಂತಾಗಿದೆ.

ಈಗಾಗಲೇ ‘94ಸಿ’ಯಡಿ ಜಿಲ್ಲೆಯಲ್ಲಿ 70,691 ಅರ್ಜಿಗಳು ಸಲ್ಲಿಕೆಯಾಗಿವೆ. ಆ ಪೈಕಿ 32,268 ಅರ್ಜಿಗಳು ವಿಲೇವಾರಿಯಾಗಿವೆ. ಇನ್ನೂ 38,423 ಅರ್ಜಿಗಳು ವಿಲೇವಾರಿಯಾಗಲು ಬಾಕಿ ಇವೆೆ. ‘94 ಸಿಸಿ’ಯಡಿ ಸುಮಾರು 30 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.

ಆರಂಭದಲ್ಲೇ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ನಿಯಮಾವಳಿ ರೂಪಿಸಿದ್ದರೆ ಈ ಸಮಸ್ಯೆಯಾಗುತ್ತಿರಲಿಲ್ಲ. ‘94ಸಿ’ಯಡಿ ಅರ್ಜಿ ಸಲ್ಲಿಸಿದ ಗ್ರಾಮಾಂತರ ಪ್ರದೇಶದ ಸಾವಿರಾರು ಮಂದಿ ಮತ್ತೆ ಅರ್ಜಿ ಸಲ್ಲಿಸುವ ಸಮಸ್ಯೆಗೆ ಸಿಲುಕಿದ್ದರೆ, ಅಧಿಕಾರಿ-ಸಿಬ್ಬಂದಿ ವರ್ಗ ಆವರೆಗೆ ಮಾಡಿದ ಶ್ರಮವೂ ವ್ಯರ್ಥ. ಆರಂಭದಲ್ಲಿ ಸಲ್ಲಿಸಿದ ಅರ್ಜಿಗಳು ಕಸದ ತೊಟ್ಟಿಯ ಪಾಲಾಗಲು ಹಿರಿಯ ಅಧಿಕಾರಿಗಳೇ ಕಾರಣ. ಇದರಿಂದ ಸರಕಾರಕ್ಕೆ ಕೆಟ ್ಟಹೆಸರು ಬರುವಂತಾಗಿದೆ.

-ಮುಹಮ್ಮದ್ ಇಸ್ಮಾಯೀಲ್, ದೇರಳಕಟ್ಟೆ

ಅಧಿಕಾರಿಗಳ ಎಡವಟ್ಟಿನಿಂದ ಅರ್ಜಿದಾರರಿಗೆ ಸಮಸ್ಯೆ ಯಾಗಿದೆ. ಆದರೂ ಪರವಾಗಿಲ್ಲ. ಅಕ್ರಮ ಒಮ್ಮೆ ಸಕ್ರಮವಾದರೆ ಸಾಕು. ಅದಕ್ಕಾಗಿ ಸರಕಾರ ಅಧಿಕಾರಿಗಳಿಗೆ ಎಲ್ಲ ಅರ್ಜಿಗಳ ವಿಲೇವಾರಿಗಾಗಿ ಕಾಲಮಿತಿ ಹಾಕಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಈ ಅರ್ಜಿಗಳು ಕಣ್ಮರೆಯಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಪ್ರಮೇಯ ಎದುರಾಗದಿದ್ದರೆ ಸಾಕು.

-ರವಿ, ಕೊಣಾಜೆ.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News