14, 17 ವರ್ಷದೊಳಗಿನ ಮಕ್ಕಳಿಗೆ ಮಂಗಳೂರಿನಲ್ಲಿ ಸ್ಪರ್ಧೆ

Update: 2016-12-07 18:30 GMT

ಉಡುಪಿ, ಡಿ.7: 2020ರಲ್ಲಿ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಆಯ್ಕೆಗಾಗಿ ‘ಪ್ರತಿಭೆಗಳ ಹುಡುಕಾಟ’ ಪ್ರಕ್ರಿಯೆ ಆರಂಭಗೊಂಡಿದ್ದು, ಸ್ಪ್ರಿಂಟ್ ಓಟಗಳ ಪ್ರತಿಭೆಯನ್ನು ಗುರುತಿಸುವ ಜವಾಬ್ದಾರಿ ಪಡೆದಿರುವ ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆಯು (ಎನ್‌ವೈಸಿಎಸ್) ಇದೇ ಡಿ.18ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್ ನಡೆಸಲಿದೆ.

ಅಂತಾರಾಷ್ಟ್ರೀಯ ಕ್ರೀಡಾಕ್ಷೇತ್ರದಲ್ಲಿ ಭಾರತದ ಮಟ್ಟವನ್ನು ಮೇಲಕ್ಕೆತ್ತುವ ಪ್ರಯತ್ನವಾಗಿ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ಪೆಟ್ರೋಲಿಯಂ ಇಲಾಖೆಯ ಭಾರತ ಅನಿಲ ಪ್ರಾಧಿಕಾರ (ಜಿಎಐಎಲ್- ಗೈಲ್) ಸಂಸ್ಥೆಯ ಅಧೀನದ ಎನ್‌ವೈಸಿಎಲ್‌ಗೆ 100ಮೀ., 200ಮೀ. ಹಾಗೂ 400ಮೀ.ಗಳಲ್ಲಿ 11ರಿಂದ 14 ವರ್ಷದೊಳಗಿನ ಹಾಗೂ 15ರಿಂದ 17ವರ್ಷದೊಳಗಿನ ಪ್ರತಿಭಾನ್ವಿತ ಬಾಲಕ-ಬಾಲಕಿಯರ ಆಯ್ಕೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ ಎಂದು ಸಂಸ್ಥೆಯ ಉಡುಪಿ ಜಿಲ್ಲಾ ಪ್ರತಿನಿಧಿ ಅಭಿಷೇಕ್ ರಾವ್ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆ 29 ರಾಜ್ಯಗಳ 660 ಜಿಲ್ಲೆಗಳನ್ನು ಸೇರಿಸಿ ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದೆ. ಈ ಮೂರು ವಿಭಾಗಗಳಲ್ಲಿ ವೇಗದ ಓಟಗಾರರನ್ನು ಗ್ರಾಮೀಣ ಮಟ್ಟದಿಂದ ನಗರ ಮಟ್ಟದವರೆಗೆ ಗುರುತಿಸುವ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಂಡಿದೆ ಎಂದವರು ಹೇಳಿದರು.

 ಕರ್ನಾಟಕ ರಾಜ್ಯದಲ್ಲಿ ಮಂಗಳೂರು, ಬೆಳಗಾವಿ, ಕಲಬುರಗಿ, ಬೆಂಗಳೂರು ಮತ್ತು ಕೊಡಗು ವಿಭಾಗಗಳಿದ್ದು, ಡಿ.18ರಂದು ಮಂಗಳೂರು ವಿಭಾಗ ಮಟ್ಟದ ಪ್ರತಿಭಾನ್ವೇಷಣೆ ನಡೆಯಲಿದೆ. ಮಂಗಳೂರು ವಿಭಾಗದಲ್ಲಿ ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿವೆ. ಈ ಎಲ್ಲ ಜಿಲ್ಲೆಗಳಿಂದ ಎರಡು ವಿಭಾಗಗಳ (11ರಿಂದ 14 ವರ್ಷ, 15ರಿಂದ 17 ವರ್ಷದ ಬಾಲಕ-ಬಾಲಕಿಯರು) ಆಸಕ್ತ ಯುವ ಪ್ರತಿಭೆಗಳು ಡಿ.18ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲೆಯ ನಿಗದಿತ ವಯೋಮಿತಿಯ ಯಾವುದೇ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಜನನ ಪ್ರಮಾಣ ಪತ್ರದ ಪ್ರತಿ, ಶಾಲೆಯಿಂದ ನೀಡಿರುವ ದಾಖಲೆ ಪ್ರತಿವನ್ನು ಹಾಗೂ ಫೋಟೊಗಳನ್ನು ಕಡ್ಡಾಯವಾಗಿ ತರಬೇಕು. ಅರ್ಜಿಯನ್ನು ಪ್ರತೀ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಅಥವಾ ಪಪೂ ಶಿಕ್ಷಣ ಇಲಾಖೆಯ ಪ್ರಾಚಾರ್ಯರ ಸಂಘದಿಂದ ಪಡೆದು ಡಿ.14ರೊಳಗೆ ಟಿಪಿಒ ಅಥವಾ ದೈಹಿಕ ಶಿಕ್ಷಣ ಅಧಿಕಾರಿಯ ಕಚೇರಿಗೆ ಸಲ್ಲಿಸಬಹುದು.

ಮಂಗಳಾ ಕ್ರೀಡಾಂಗಣದಲ್ಲಿ ಡಿ.18ರಂದು ಬೆಳಗ್ಗೆ 8:30ಕ್ಕೆ ಸ್ಪರ್ಧೆ ಪ್ರಾರಂಭಗೊಳ್ಳಲಿದ್ದು, 100ಮೀ., 200ಮೀ. ಹಾಗೂ 400ಮೀ. ಓಟದಲ್ಲಿ ಪ್ರತಿ ವಿಭಾಗದಲ್ಲೂ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಅರ್ಹತಾ ಮಟ್ಟವನ್ನು ನಿಗದಿಪಡಿಸಲಾಗಿದೆ. ಅದರಲ್ಲೂ ಸಿಂಥೆಟಿಕ್ ಅಂಗಣ ಹಾಗೂ ಹುಲ್ಲುಹಾಸಿನ ಅಥವಾ ಮಣ್ಣಿನ ಅಂಗಣಕ್ಕೆ ಪ್ರತ್ಯೇಕ ಅರ್ಹತಾ ಮಟ್ಟ ನಿಗದಿಯಾಗಿದ್ದು, ಇದರೊಂದಿಗೆ ಗುರಿಮುಟ್ಟುವ ಪ್ರತೀ ಮಕ್ಕಳು ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಅಲ್ಲಿಂದ ಮುಂದೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದವರು ವಿವರಿಸಿದರು.

abhishekrao2009@gmail.com- ರಾಷ್ಟ್ರ ಮಟ್ಟದ ಟ್ರಯಲ್ಸ್‌ನಲ್ಲೂ ಆಯ್ಕೆಯಾಗುವ ಕ್ರೀಡಾಪಟುಗಳನ್ನು 2020ರ ಒಲಿಂಪಿಕ್ಸ್‌ಗಾಗಿ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆ ಸಂಪೂರ್ಣವಾಗಿ ಉಚಿತ ಹಾಗೂ ಪಾರದರ್ಶಕವಾಗಿ ನಡೆಯಲಿದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದವರಿಗೆ ಮುಂದಿನ 4 ವರ್ಷ ಉಚಿತ ತರಬೇತಿಯನ್ನು ನೀಡಲಾಗುತ್ತದೆ ಎಂದು ಅಭಿಷೇಕ್ ರಾವ್ ತಿಳಿಸಿದರು. ಹೆಚ್ಚಿನ ಮಾಹಿತಿಗಳಿಗಾಗಿ ಜಿಲ್ಲಾ ಪ್ರತಿನಿಧಿ ಅಭಿಷೇಕ್ ರಾವ್ (ಮೊ.ನಂ.:9483927870)ಇವರ ಇಮೇಲ್ ವಿಳಾಸ: ಈ ವಿಳಾಸವನ್ನು ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಗ್ರೆಗರಿ ಡಿಸಿಲ್ವ, ಸೀತಾರಾಮ ಶೆಟ್ಟಿ, ಮಧುಕರ ಎಸ್. ಹಾಗೂ ಕಿರಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News