ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಕಾರ್ಯಕ್ರಮ ನಡೆಯಲಿ: ಶಕುಂತಳಾ ಶೆಟ್ಟಿ

Update: 2016-12-07 18:43 GMT

ಪುತ್ತೂರು, ಡಿ.7: ತಾಲೂಕು ಮಟ್ಟದ ಕರಾವಳಿ ಉತ್ಸವ ಡಿ.26 ಮತ್ತು 27ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಈ ಕುರಿತು ವಿವಿಧ ಸಂಘ ಸಂಸ್ಥೆ ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ಸಹಾಯಕ ಕಮಿಷನರ್ ಡಾ. ರಘುನಂದನ ಮೂರ್ತಿ ಮತ್ತು ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ಬುಧವಾರ ತಾಪಂ ಸಭಾಂಗಣದಲ್ಲಿ ಪೂರ್ವ ಭಾವಿ ಸಭೆ ನಡೆಯಿತು.

ಸಭೆಯಲ್ಲಿ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಈ ವರ್ಷ ಕಿಲ್ಲೆ ಮೈದಾನದಲ್ಲಿ ಕರಾವಳಿ ಉತ್ಸವ ನಡೆಸುವ ನಿರ್ಣಯ ಕೈಗೊಳ್ಳಲಾಯಿತು. ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸುವಾಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಾರಿಗೂ ನೋವುಂಟು ಮಾಡುವ ಟಾಂಗ್ ಕೊಡುವ ಕಾರ್ಯಕ್ರಮ ಆಗದಿರಲಿ. ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಿರಬೇಕು ಎಂದು ಹೇಳಿದರು. ಅದರಲ್ಲೂ ಪೊಲೀಸರ ವೇಷಭೂಷಣ ಹಾಕಿ ಅವರಿಗೆ ನೋವುಂಟು ಮಾಡುವ ಸಂದೇಶ ಬೇಡ ಎಂದು ಸ್ಪಷ್ಟ ಪಡಿಸಿದರು.

ಫೊಟೋಗ್ರಫಿ, ಜ್ಯುವೆಲ್ಲರಿ, ಸಿವಿಲ್ ಇಂಜಿನಿಯರ್ ಅಸೋಸಿಯೆಶನ್‌ರವರಿಂದ ವಿಶೇಷ ಸ್ಪರ್ಧೆಗಳು ನಡೆಯಲಿದೆ. ಅತ್ಯುತ್ತಮ ಫೊಟೋಗ್ರಫಿ, ಅತ್ಯುತ್ತಮ ಆಭರಣಗಳು, ಕಡಿಮೆ ಖರ್ಚಿನಲ್ಲಿ ಉತ್ತಮ ಗೃಹ ನಿರ್ಮಾಣದ ಸ್ಪರ್ಧೆಗಳು ನಡೆಯಲಿದೆ. ಸೇಡಿಯಾಪು ವಿಶ್ವಪ್ರಸಾದ್ ಮತ್ತು ತಂಡ ಇದರ ನೇತೃತ್ವ ವಹಿಸಲಿದ್ದಾರೆ. ಜೊತೆಗೆ ವಿವಿಧ ಇಲಾಖೆಗಳ ಮಾಹಿತಿ ನೀಡುವ ಮಳಿಗೆಗಳು ಪ್ರದರ್ಶನಗೊಳ್ಳಲಿದೆ ಎಂದು ಶಕುಂತಳಾ ಶೆಟ್ಟಿ ತಿಳಿಸಿದರು.

ಸಹಾಯಕ ಕಮಿಷನರ್ ಡಾ. ರಘುನಂದನ್ ಮೂರ್ತಿ ಕಾರ್ಯಕ್ರಮದ ಚೌಕಟ್ಟಿನ ಮತ್ತು ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಾರ್ಯಕ್ರಮದ ವಿವರಣೆ ನೀಡಿದರು. ಪ್ರೊ. ಬಿ.ಜೆ ಸುವರ್ಣ, ಜೋಕಿಂ ಡಿಸೋಜ, ವಿಶ್ವಪ್ರಸಾದ್ ಸೇಡಿಯಾಪು, ಜೇಮ್ಸ್ಸ್ ಜೆ. ಮಾಡ್ತಾ, ಕ್ಸೇವಿಯರ್ ಡಿಸೋಜ, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಿದರು. ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ಸಭೆಗೆೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಕರ್ಷಿಸಲು ಇತರ ಭಿನ್ನ ಸ್ಪರ್ಧೆಗಳನ್ನು ಇಡುವ ಕುರಿತು ಸಭೆಯಲ್ಲಿ ಸಂಸ್ಥೆಯ ಸದಸ್ಯರು ಸಲಹೆ ನೀಡಿದರು. ಟ್ರಾಫಿಕ್ ಕುರಿತು ಜಾಗೃತಿ ಸ್ಪರ್ಧೆ ಮಾಡುವುದಾದರೆ ಪೊಲೀಸ್ ಇಲಾಖೆಯಿಂದ ಬಹುಮಾನದ ವ್ಯವಸ್ಥೆ ಮಾಡಲಾಗುವುದು ಎಂದು ಎ.ಎಸ್ಪಿರಿಷ್ಯಂತ್ ಸಿ.ಬಿ ತಿಳಿಸಿದರು.

ತಹಶೀಲ್ದಾರ್ ಅನಂತ ಶಂಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಉಪತಹಶೀಲ್ದಾರ್ ಶ್ರೀಧರ್ ಕೆ, ಯುವಜನ ಒಕ್ಕೂಟದ ಸುರೇಶ್ ರೈ ಸೂಡಿಮುಳ್ಳು, ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News