×
Ad

ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ತೋರಿಸಲಿದೆ ಆಕಾಶವಾಣಿ!

Update: 2016-12-08 09:01 IST

ಹೊಸದಿಲ್ಲಿ, ಡಿ.8: ಆಕಾಶವಾಣಿ ಇನ್ನು ಕೆಲವೇ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಥದರ್ಶಕ ವ್ಯವಸ್ಥೆ (ನೇವಿಗೇಶನ್)ಯಾಗಿ ಕಾರ್ಯ ನಿರ್ವಹಿಸಲಿದೆ. ಹೆದ್ದಾರಿಯಲ್ಲಿ ಯಾವುದೇ ಅವಘಡ, ವಾಹನದಟ್ಟಣೆ ಬಗೆಗಿನ ನಿಖರ ಮಾಹಿತಿಯನ್ನು 13 ಕಾರಿಡಾರ್‌ಗಳ ವ್ಯಾಪ್ತಿಯಲ್ಲಿ ನೀಡಲು ಆಕಾಶವಾಣಿ ಸಿದ್ಧತೆ ಮಾಡಿಕೊಂಡಿದೆ.

ನೀವು ಮಾಡಬೇಕಾದ್ದು ಇಷ್ಟೇ. ಆಕಾಶವಾಣಿಯ ಎಫ್‌ಎಂ ಚಾನಲ್‌ಗೆ ಟ್ಯೂನ್ ಮಾಡಿ. ದೇಶದ 2500 ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳ ಮಾಹಿತಿ ನಿಮಗೆ ಲಭ್ಯವಾಗಲಿದೆ.

ದಿಲ್ಲಿ- ಜೈಪುರ ನಡುವಿನ ಹೆದ್ದಾರಿಗೆ ಸಂಬಂಧಿಸಿದಂತೆ ಎಐಆರ್ ಎಫ್‌ಎಂ ಪ್ರಸಾರ ಮಾಡುತ್ತಿದ್ದ 'ಹೈವೇ ಕಿ ಬಾತೀನ್’ ಯಶಸ್ಸಿನ ಹಿನ್ನೆಲೆಯಲ್ಲಿ, ಇದನ್ನು ಎಲ್ಲಾ ಪ್ರಮುಖ ಹೆದ್ದಾರಿಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಹರ್ಯಾಣ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಇದರ ಪ್ರಯೋಜನ ಪಡೆಯಲಿವೆ.

ಹೆದ್ದಾರಿ ಸಲಹಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ವಿಶ್ವಬ್ಯಾಂಕ್, ಭಾರತದ ರಸ್ತೆ ಸಾರಿಗೆ ಸಚಿವಾಲಯಕ್ಕೆ ನೆರವು ನೀಡುತ್ತಿದ್ದು, ಹೊಸ ಕ್ಷೇತ್ರಗಳಿಗೆ ಇದನ್ನು ವಿಸ್ತರಿಸಲು ಈಗಾಗಲೇ ಒಪ್ಪಿಗೆ ನೀಡಿದೆ. ದಿಲ್ಲಿ-ಚಂಡೀಗಡ, ಭೋಪಾಲ್- ಇಂಧೋರ್, ಲಕ್ನೋ- ಗೋರಖ್‌ಪುರ, ನಾಗ್ಪುರ- ರಾಯಪುರ, ಮುಂಬೈ- ಪುಣೆ, ಅಹ್ಮದಾಬಾದ್- ವಡೋದರ, ಚೆನ್ನೈ- ಬೆಂಗಳೂರು, ಕಟಕ್- ಪುರಿ, ಕೊಲ್ಕತ್ತಾ-ಅಸನಾಲ್ ಹೆದ್ದಾರಿಗಳಲ್ಲಿ ಈ ಸೌಲಭ್ಯ ಸಿಗಲಿದೆ. ರೇಡಿಯೊ ಜಾಕಿಗಳು ಈ ಹೆದ್ದಾರಿಗಳ ಸಂಚಾರ ಹಾಗೂ ಹವಾಮಾನದ ಬಗ್ಗೆ ಪ್ರತಿ ಅರ್ಧ ಗಂಟೆಗೊಮ್ಮೆ ಮಾಹಿತಿ ನೀಡುವರು.

ಪ್ರಯಾಣಿಕರು, ಗಸ್ತು ವಾಹನ, ಟೋಲ್ ಪ್ಲಾಝಾ, ಮೊಬೈಲ್ ಅಪ್ಲಿಕೇಶನ್, ದೂರವಾಣಿ ಹಾಗೂ ಸೆನ್ಸಾರ್‌ಗಳ ಮೂಲಕ ಮಾಹಿತಿ ಪಡೆಯಲು ಉದ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News