ರೈಲ್ವೆ ಪ್ರಯಾಣಿಕರಿಗೆ ’ಪ್ರಭುಗಳ’ ವಿಶೇಷ ಮನವಿ!
ಹೊಸದಿಲ್ಲಿ, ಡಿ.8: ನಷ್ಟದಲ್ಲಿರುವ ಭಾರತೀಯ ರೈಲ್ವೆಯನ್ನು ಮೇಲೆತ್ತಲು ರೈಲ್ವೆ ಸಚಿವ ಸುರೇಶ್ ಪ್ರಭು ಇದೀಗ ಪ್ರಯಾಣಿಕರ ಮೊರೆ ಹೋಗಿದ್ದಾರೆ. ರೈಲ್ವೆ ಪ್ರಯಾಣಿಕರು ತಮಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಸ್ವಯಂಪ್ರೇರಿತರಾಗಿ ತ್ಯಜಿಸುವಂತೆ ಮನವಿ ಮಾಡಿದ್ದಾರೆ. ಕೆಲ ರೈಲುಗಳಿಗೆ ನೀಡುತ್ತಿರುವ ವಿಶೇಷ ವಾರಾಂತ್ಯ ದರಗಳು, ಖಾಲಿ ಬರ್ತ್‌ಗಳಿಗೆ ಕೊನೆಕ್ಷಣದ ರಿಯಾಯಿತಿಯಂತಹ ಸೌಲಭ್ಯಗಳನ್ನು ಬಿಟ್ಟುಬಿಡುವಂತೆ ಪ್ರಯಾಣಿಕರನ್ನು ಕೋರಿದ್ದಾರೆ.
ಪ್ರಭು ರೈಲ್ವೆ ಮಂಡಳಿಗೆ ನವೆಂಬರ್ 24ರಂದು ನೀಡಿರುವ ಟಿಪ್ಪಣಿಯಲ್ಲಿ ಈ ಸಲಹೆಗಳನ್ನು ನೀಡಿದ್ದು, ಕೆಲವೇ ದಿನಗಳಲ್ಲಿ ಇದಕ್ಕೆ ಅಗತ್ಯವಾದ ನೀತಿ ರೂಪಿಸಲಾಗುವುದು ಎಂದು ಮೂಲಗಳು ಹೇಳಿವೆ, ಆದರೆ ಜನರೇ ಸಬ್ಸಿಡಿ ಬಿಟ್ಟುಬಿಡುವಂತೆ ಕೋರುವುದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೆಟ್ರೋಲಿಯಂ ಸಚಿವಾಲಯದ ವಿಚಾರದಲ್ಲಿ, ಗ್ರಾಹಕರ ಬ್ಯಾಂಕ್ ಖಾತೆಗಳನ್ನು ಎಲ್‌ಪಿಜಿ ಸಂಪರ್ಕಗಳಿಗೆ ಸಂಪರ್ಕಿಸಲಾಗಿದೆ. ಇದರಿಂದಾಗಿ ಜನತೆ ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಡುವುದು ಸುಲಭ. ಆದರೆ ರೈಲ್ವೆಯಲ್ಲಿ ಈ ಮಾದರಿ ಪರಿಣಾಮಕಾರಿಯಾಗದು. ಹೊಸ ವ್ಯವಸ್ಥೆಯನ್ನು ಯೋಚಿಸಬೇಕು. ಆರಂಭಿಕ ಹಂತದಲ್ಲಿ ಇ-ಟಿಕೆಟ್‌ಗೆ ಮಾತ್ರ ಇದನ್ನು ಅನ್ವಯಿಸಬೇಕಾಗಬಹುದು ಎಂದು ಮೂಲಗಳು ಹೇಳಿವೆ.
ರೈಲ್ವೆ ಪ್ರಯಾಣಕ್ಕೆ ತಗುಲುವ ವೆಚ್ಚದ ಶೇ.57ನ್ನು ಮಾತ್ರ ಟಿಕೆಟ್ ರೂಪದಲ್ಲಿ ಪಡೆಯಲಾಗುತ್ತಿದೆ ಎಂದು ರೈಲ್ವೆ ಹೇಳುತ್ತಿದೆ. ಅಂದರೆ ಪ್ರತಿ ಟಿಕೆಟ್‌ನ ಮೇಲೆ ಶೇ.43ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದನ್ನು ಬಿಟ್ಟುಬಿಡಲು ಜನರಿಗೆ ಸ್ಫೂರ್ತಿ ನೀಡಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.