×
Ad

‘ಭಾರತದಲ್ಲಿ 1,900ಕ್ಕೂ ಅಧಿಕ ಪಕ್ಷಗಳಿವೆ, 400 ಪಕ್ಷಗಳು ಈ ತನಕ ಸ್ಪರ್ಧಿಸಿಲ್ಲ’

Update: 2016-12-08 10:29 IST

ಹೊಸದಿಲ್ಲಿ, ಡಿ.8: ಭಾರತೀಯರಿಗೆ ರಾಜಕೀಯ ಒಂದು ಹವ್ಯಾಸವಾಗಿ ಪರಿಣಮಿಸಿದೆ. ಇದಕ್ಕೆ ಸಾವಿರಾರು ಪಕ್ಷಗಳೇ ಸಾಕ್ಷಿ. ವಿಶ್ವದಲ್ಲಿ ಅತ್ಯಂತ ಹೆಚ್ಚು ರಾಜಕೀಯ ಪಕ್ಷಗಳು ಭಾರತದಲ್ಲಿ ಕಾಣಸಿಗುತ್ತಿವೆ.

ಭಾರತದಲ್ಲಿ ಪ್ರಸ್ತುತ 1,900ಕ್ಕೂ ಅಧಿಕ ರಾಜಕೀಯ ಪಕ್ಷಗಳಿವೆ. ಈ ಪೈಕಿ 400ಕ್ಕೂ ಅಧಿಕ ಪಕ್ಷಗಳು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಮಾಹಿತಿ ನೀಡಿದ್ದಾರೆ.

ಕೆಲವು ಪಕ್ಷಗಳು ಕಪ್ಪು ಹಣ ಬಿಳಿ ಮಾಡುವುದರಲ್ಲಿ ತೊಡಗಿವೆ ಎಂದು ಚುನಾವಣಾ ಆಯುಕ್ತರು ಶಂಕೆ ವ್ಯಕ್ತಪಡಿಸಿದ್ದಾರೆ.

 ಇಂತಹ ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಕೊಳ್ಳಲು ಚುನಾವಣಾ ಆಯೋಗ(ಇಸಿ) ಪ್ರಕ್ರಿಯೆ ಆರಂಭಿಸಿದೆ. ಚುನಾವಣಾ ಆಯೋಗದಿಂದ ಇಂತಹ ಪಕ್ಷಗಳ ಹೆಸರನ್ನು ತೆಗೆದುಹಾಕಿ ಅವುಗಳಿಗೆ ದೇಣಿಗೆ ಮೂಲಕ ಬರುತ್ತಿದ್ದ ಹಣದ ಮೇಲಿನ ಆದಾಯ ತೆರಿಗೆ ವಿನಾಯಿತಿ ಹಕ್ಕನ್ನು ರದ್ದುಪಡಿಸಲಾಗುತ್ತದೆ ಎಂದು ಝೈದಿ ತಿಳಿಸಿದ್ದಾರೆ.

 ಚುನಾವಣಾ ಆಯೋಗ ಇಂತಹ ಪಕ್ಷಗಳ ನೋಂದಣಿಯನ್ನು ರದ್ದುಪಡಿಸುತ್ತಿಲ್ಲ ಏಕೆ ಎಂದು ಕೇಳಿದಾಗ,‘‘ಪಕ್ಷಗಳ ನೋಂದಣಿ ರದ್ದುಪಡಿಸುವುದು ಅತ್ಯಂತ ದೀರ್ಘ ಪ್ರಕ್ರಿಯೆಯಾಗಿದೆ. ಪಕ್ಷಗಳ ಅಕ್ರಮ ಚಟುವಟಿಕೆಯನ್ನು ಪತ್ತೆ ಹಚ್ಚಿದ ಬಳಿಕ ಚುನಾವಣಾ ಆಯೋಗ ತಕ್ಷಣವೇ ಕ್ರಮಕೈಗೊಳ್ಳಲಿದೆ’’ ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ನೋಂದಾಯಿತ ಪಕ್ಷಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಸಿಇಸಿಗೆ ಸೂಚನೆ ನೀಡಿದೆ. ಈ ಪಕ್ಷಗಳು ದೇಣಿಗೆ ಸಂಗ್ರಹಿಸುತ್ತಿರುವ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇನ್ನು ಮುಂದೆ ಪ್ರತಿವರ್ಷ ಚುನಾವಣೆಯಲ್ಲಿ ಸ್ಪರ್ಧಿಸದ ನೋಂದಾಯಿತ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಝೈದಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News