ಕೇಂದ್ರದ ಒಬಿಸಿ ಪಟ್ಟಿಗೆ 15 ಹೊಸ ಹೆಸರುಗಳು

Update: 2016-12-08 14:01 GMT

ಹೊಸದಿಲ್ಲಿ, ಡಿ.8: ಕೇಂದ್ರ ಸರಕಾರದ ಇತರ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ 15 ಹೊಸ ಜಾತಿಗಳನ್ನು ಸೇರಿಸಲಾಗಿದೆ. ಈ ಸಂಬಂಧ ಸರಕಾರವು ಅಧಿಸೂಚನೆಯನ್ನು ಹೊರಡಿಸಿದೆ.

ಅಸ್ಸಾಂ, ಬಿಹಾರ, ಹಿಮಾಚಲಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ ಹಾಗೂ ಉತ್ತರಾಖಂಡ. ಈ 8 ರಾಜ್ಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು(ಎನ್‌ಸಿಬಿಸಿ) ಒಟ್ಟು 28 ಬದಲಾವಣೆಗಳನ್ನು ಶಿಫಾರಸು ಮಾಡಿದೆ. ಈ 28ರಲ್ಲಿ, ಬಿಹಾರದ ಗಧೇರಿ/ಇಟಫರೋಶ್, ಜಾರ್ಖಂಡ್‌ನ ರೆರಾ ಹಾಗೂ ಜಮ್ಮು-ಕಾಶ್ಮೀರದ ಲಬನಾ ಸಹಿತ 15 ಜಾತಿಗಳು ಹೊಸ ಸೇರ್ಪಡೆಗಳು. 9 ಜಾತಿಗಳು ಈಗಾಗಲೇ ಪಟ್ಟಿಯಲ್ಲಿರುವ ಜಾತಿಗಳ ಉಪಜಾತಿಗಳು ಹಾಗೂ ನಾಲ್ಕು ತಿದ್ದುಪಡಿಗೊಂಡವುಗಳಾಗಿವೆ.

ಕೇಂದ್ರ ಸರಕಾರವು ಮೇಲೆ ತಿಳಿಸಿದ ಎನ್‌ಸಿಬಿಸಿ ಹಾಗೂ ಜಮ್ಮು-ಕಾಶ್ಮೀರ ಸರಕಾರಗಳ ಶಿಫಾರಸುಗಳನ್ನು ಪರಿಶೀಲಿಸಿ ಅಂಗೀಕರಿಸಿದೆ ಹಾಗೂ ಮೇಲೆ ಹೇಳಿದ ರಾಜ್ಯಗಳ ಇತರ ಹಿಂದುಳಿದ ವರ್ಗಗಳ ಕೇಂದ್ರೀಯ ಪಟ್ಟಿಯಲ್ಲಿ ಸೇರ್ಪಡೆ/ತಿದ್ದುಪಡಿಗಳನ್ನು ಅಧಿಸೂಚಿಸಲು ನಿರ್ಧರಿಸಿದೆಯೆಂದು ಜಂಟಿ ಕಾರ್ಯದರ್ಶಿ ಬಿ.ಎಲ್. ಮೀನಾ ಸಹಿ ಹಾಕಿರುವ ಅಧಿಸೂಚನೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ನಡೆದಿದ್ದ ಸಂಪುಟ ಸಭೆಯೊಂದರಲ್ಲಿ ಎನ್‌ಸಿಬಿಸಿಯ ಪ್ರಸ್ತಾವವನ್ನು ಮಂಜೂರು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News