ನೋಟು ರದ್ದತಿಗೆ ತಿಂಗಳು: ದೀರ್ಘಾವಧಿ ಲಾಭ ದೊರೆಯಲಿದೆ: ಮೋದಿ
ಹೊಸದಿಲ್ಲಿ, ಡಿ.8: ನೋಟು ರದ್ದತಿಯಿಂದ ದೇಶದಲ್ಲಿ ಅಭೂತಪೂರ್ವ ನಗದು ಬಿಕ್ಕಟ್ಟು ಸೃಷ್ಟಿಯಾದ ಒಂದು ತಿಂಗಳ ಬಳಿಕ, ಪ್ರಧಾನಿ ನರೇಂದ್ರ ಮೋದಿ ಗುರುವಾರ ತನ್ನ ನಿರ್ಧಾರವನ್ನು ಸಮರ್ಥಿಸಿದ್ದು, ಅದರಿಂದ ದೀರ್ಘಾವಧಿ ಲಾಭ ಲಭಿಸಲಿದೆ ಎಂದಿದ್ದಾರೆ.
ಸರಕಾರದ ಕ್ರಮದಿಂದ ಸ್ವಲ್ಪ ಅನನುಕೂಲವಾಗಬಹುದೆಂದು ತಾನು ಸದಾ ಹೇಳುತ್ತಲೇ ಬಂದಿದ್ದೇನೆ. ಆದರೆ, ಈ ಅಲ್ಪಾವಧಿ ನೋವು ದೀರ್ಘಾವಧಿ ಲಾಭವನ್ನು ನೀಡಲಿದೆಯೆಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕಪ್ಪು ಹಣದ ವಿರುದ್ಧದ ಈ ಯಜ್ಞದಲ್ಲಿ ಹೃದಯಪೂರಕವಾಗಿ ಭಾಗವಹಿಸಿರುವ ಭಾರತದ ಜನತೆಗೆ ತಾನು ಶಿರಬಾಗುತ್ತೇನೆ. ಈ ನಿರ್ಧಾರದಿಂದ ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿರುವ ರೈತರು, ವ್ಯಾಪಾರಿಗಳು, ಕಾರ್ಮಿಕ ವರ್ಗಗಳಿಗೆ ಹಲವು ಪ್ರಯೋಜನಗಳಾಗಲಿವೆ. ಗ್ರಾಮೀಣ ಭಾರತದ ಅಭಿವೃದ್ಧಿ ಹಾಗೂ ಸಮೃದ್ಧಿಗಳು ಇನ್ನು ಮುಂದೆ ಭ್ರಷ್ಟಾಚಾರ ಹಾಗೂ ಕಪ್ಪು ಹಣದಿಂದ ಬಾಧಿತವಾಗಲಾರದೆಂದು ಮೋದಿ ಟ್ವೀಟಿಸಿದ್ದಾರೆ.
ನ.8ರ ರಾತ್ರಿ ಪ್ರಧಾನಿ ಮೋದಿ ರೂ.500 ಹಾಗೂ 1000ದ ನೋಟು ರದ್ದತಿಯನ್ನು ಘೋಷಿಸಿದ್ದರು.
ಈ ಕ್ರಮವು ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದಕರಿಗೆ ನಿಧಿ ಪೂರೈಕೆ ಹಾಗೂ ನಕಲಿ ನೋಟುಗಳ ವಿರುದ್ಧ ಹೋರಾಡುವ ಗುರಿಯಿರಿಸಿದೆ. ನಾವು ಸಹ ಆರ್ಥಿಕ ವರ್ಗಾವಣೆಗಳಲ್ಲಿ ಹೆಚ್ಚು ನಗದು ರಹಿತ ಪಾವತಿ ಹಾಗೂ ಅತ್ಯಾಧುನಿಕ ತಾಂತ್ರಿಕತೆಯ ಬಳಕೆಯನ್ನು ಅಪ್ಪಿಕೊಳ್ಳಲು ಚಾರಿತ್ರಿಕ ಅವಕಾಶ ಪಡೆದಿದ್ದೇವೆ ಎಂದವರು ತಿಳಿಸಿದ್ದಾರೆ.
ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಹಾಗೂ ಹೆಚ್ಚು ನಗದುರಹಿತ ವ್ಯವಹಾರವನ್ನು ಖಚಿತಪಡಿಸಲು ನೆರವಾಗುವಂತೆ ಯುವ ಜನತೆಗೆ ಮೋದಿ ಕರೆ ನೀಡಿದ್ದಾರೆ.
ಭಾರತವು ಕಾಳಧನವನ್ನು ಸೋಲಿಸುವುದನ್ನು ಎಲ್ಲರೂ ಒಟ್ಟಾಗಿ ಖಚಿತಪಡಿಸಬೇಕು. ಇದು ಬಡವರು, ಹೊಸ ಮಧ್ಯಮವರ್ಗವನ್ನು ಸಬಲಗೊಳಿಸಿ ಮುಂದಿನ ತಲೆಮಾರಿಗೆ ಲಾಭ ನೀಡಲಿದೆಯೆಂದು ಅವರು ಹೇಳಿದ್ದಾರೆ.