ಟ್ರಂಪ್ ಎದುರಿಸಲು ಪರಮಾಣು ಅಸ್ತ್ರಗಳನ್ನು ಹೆಚ್ಚಿಸಿ : ಚೀನಾ ಮಾಧ್ಯಮ ಒತ್ತಾಯ
ಬೀಜಿಂಗ್, ಡಿ. 8: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಎದುರಿಸಲು ಚೀನಾ ತನ್ನ ಸೇನಾ ವಿನಿಯೋಗವನ್ನು ಗಣನೀಯವಾಗಿ ಹೆಚ್ಚಿಸಬೇಕು ಹಾಗೂ ಹೆಚ್ಚು ಪರಮಾಣು ಅಸ್ತ್ರಗಳನ್ನು ನಿರ್ಮಿಸಬೇಕು ಎಂದು ಚೀನಾದ ರಾಷ್ಟ್ರೀಯವಾದಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಗುರುವಾರ ಹೇಳಿದೆ.
‘‘ಚೀನಾವನ್ನು ಮೂಲೆಗುಂಪು ಮಾಡಲು ಟ್ರಂಪ್ ಅಸ್ವೀಕಾರಾರ್ಹ ರೀತಿಯಲ್ಲಿ ಪ್ರಯತ್ನಿಸಿದರೆ, ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಚೀನಾ ಹೆಚ್ಚಿನ ಸಂಖ್ಯೆಯ ಆಯಕಟ್ಟಿನ ಪರಮಾಣು ಶಸ್ತ್ರಗಳನ್ನು ನಿರ್ಮಿಸಬೇಕು ಹಾಗೂ ಡಿಎಫ್-41ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಗಳ ನಿಯೋಜನೆಯನ್ನು ತ್ವರಿತಗೊಳಿಸಬೇಕು’’ ಎಂದು ಪತ್ರಿಕೆಯ ಗುರುವಾರದ ಸಂಚಿಕೆಯ ಸಂಪಾದಕೀಯ ಹೇಳಿದೆ.
‘‘2017ರಲ್ಲಿ ಚೀನಾದ ರಕ್ಷಣಾ ವಿನಿಯೋಗವನ್ನು ಗಮನಾರ್ಹವಾಗಿ ಹೆಚ್ಚಿಸಬೇಕು’’ ಎಂಬುದಾಗಿ ಇಂಗ್ಲಿಷ್ ಮತ್ತು ಚೀನಾ ಭಾಷೆಗಳೆರಡರಲ್ಲೂ ಪ್ರಕಟವಾದ ಸಂಪಾದಕೀಯ ಕರೆ ನೀಡಿದೆ.
‘ಗ್ಲೋಬಲ್ ಟೈಮ್ಸ್’ ಚೀನಾದ ಅಧಿಕೃತ ಮಾಧ್ಯಮವಲ್ಲ, ಆದರೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್ ತನ್ನ ಚುನಾವಣಾ ಪ್ರಚಾರದ ಉದ್ದಕ್ಕೂ ಚೀನಾದ ವಿರುದ್ಧ ಕೆಂಡ ಕಾರಿದ್ದರು ಹಾಗೂ ಅದನ್ನು ‘ಅಮೆರಿಕದ ಶತ್ರು’ ಎಂಬುದಾಗಿಯೂ ಬಣ್ಣಿಸಿದ್ದರು. ಅಮೆರಿಕವನ್ನು ‘ಸುಲಭದ ತುತ್ತು’ ಎಂಬುದಾಗಿ ಪರಿಗಣಿಸಿರುವ ಚೀನಾದ ವಿರುದ್ಧ ಕಠಿಣ ನಿಲುವು ತಳೆಯುವುದಾಗಿ ಅವರು ಬೆದರಿಕೆ ಹಾಕಿದ್ದರು.