×
Ad

ಅಲೆಪ್ಪೊ: ರಶ್ಯ, ಅಮೆರಿಕ ನಡುವೆ ಶೀಘ್ರವೇ ಒಪ್ಪಂದ?

Update: 2016-12-08 20:11 IST

ಮಾಸ್ಕೋ, ಡಿ. 8: ಸಿರಿಯದ ಸಂಘರ್ಷಪೀಡಿತ ಅಲೆಪ್ಪೊ ನಗರಕ್ಕೆ ಸಂಬಂಧಿಸಿದಂತೆ ರಶ್ಯ ಮತ್ತು ಅಮೆರಿಕಗಳು ಒಪ್ಪಂದವೊಂದಕ್ಕೆ ಸಹಿ ಹಾಕುವ ಹಂತವನ್ನು ತಲುಪಿವೆ ಎಂದು ರಶ್ಯದ ಉಪ ವಿದೇಶ ಸಚಿವ ಸರ್ಗಿ ರ್ಯಬಕೊವ್ ಹೇಳಿರುವುದಾಗಿ ಇಂಟರ್‌ಫ್ಯಾಕ್ಸ್ ವಾರ್ತಾ ಸಂಸ್ಥೆ ಗುರುವಾರ ವರದಿ ಮಾಡಿದೆ.

‘‘ಕಳೆದ ಹಲವಾರು ದಿನಗಳಲ್ಲಿ ಅಲೆಪ್ಪೊದ ಪರಿಸ್ಥಿತಿಯ ಬಗ್ಗೆ ದಾಖಲೆ ವಿನಿಮಯ ಮಾಡಿಕೊಳ್ಳುವ ಕಾರ್ಯ ತೀವ್ರ ಗತಿಯಲ್ಲಿ ನಡೆದಿದೆ’’ ಎಂದು ರ್ಯಬಕೊವ್ ಹೇಳಿದ್ದಾರೆ.

‘‘ಒಪ್ಪಂದವೊಂದಕ್ಕೆ ಬರುವ ನಿಕಟ ಸನಿಹದಲ್ಲಿ ನಾವಿದ್ದೇವೆ. ಆದರೆ, ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ ಎಂಬುದಾಗಿಯೂ ನಾನು ಎಚ್ಚರಿಸಬಯಸುತ್ತೇನೆ’’ ಎಂದು ರ್ಯಬಕೊವ್ ಹೇಳಿದ್ದಾರೆ.

ಸಿರಿಯದ ಬಂಡುಕೋರರು ಅಲೆಪ್ಪೊದಿಂದ ಸುರಕ್ಷಿತವಾಗಿ ಹೊರಹೋಗಲು ಅನುವು ಮಾಡಿಕೊಡುವ ಸಂಭಾವ್ಯ ಅಮೆರಿಕ-ರಶ್ಯ ಒಪ್ಪಂದ ಕಾರ್ಯಸೂಚಿಯಲ್ಲಿ ಈಗಲೂ ಇದೆ ಎಂದು ರಶ್ಯ ಸರಕಾರದ ನೆಲೆ ಕ್ರೆಮ್ಲಿನ್ ಬುಧವಾರ ಹೇಳಿತ್ತು

ರಶ್ಯದ ವಿದೇಶ ಸಚಿವ ಸರ್ಗಿ ಲವ್ರೊವ್ ಗುರುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿಯನ್ನು ಭೇಟಿ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News