ಪಾಕ್: ವಿಮಾನ ಅಪಘಾತ ಎಲ್ಲ 47 ಮಂದಿ ಸಾವು

Update: 2016-12-08 15:22 GMT

ಇಸ್ಲಾಮಾಬಾದ್, ಡಿ. 8: ಪಾಕಿಸ್ತಾನದ ಖೈಬರ್-ಪಖ್ತೂನ್‌ಖ್ವ ರಾಜ್ಯದಲ್ಲಿ ಬುಧವಾರ ನಡೆದ ವಿಮಾನ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲ 47 ಮಂದಿ ಮೃತಪಟ್ಟಿದ್ದಾರೆ.

ಇಂಜಿನ್ ವೈಫಲ್ಯವೇ ಹವೇಲಿಯ ಎಂಬ ನಗರದ ಹೊರವಲಯದ ಗುಡ್ಡಗಾಡು ಸ್ಥಳದಲ್ಲಿ ವಿಮಾನ ಪತನಗೊಳ್ಳಲು ಕಾರಣ ಎಂಬುದಾಗಿ ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ನಷ್ಟದಲ್ಲಿರುವ ಸರಕಾರಿ ವಾಯುಯಾನ ಸಂಸ್ಥೆ ಪಾಕಿಸ್ತಾನಿ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ ಸುರಕ್ಷತೆ ದಾಖಲೆ ಬಗ್ಗೆ ಹೊಸ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಅಪಘಾತಕ್ಕೀಡಾದ ಎಟಿಆರ್-42 ವಿಮಾನ ನಿಯಮತಿ ತಪಾಸಣೆಗೆ ಒಳಪಡುತ್ತಿತ್ತು ಎಂದು ವಾಯುಯಾನ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಅಝಮ್ ಸೈಗೊಲ್ ಹೇಳಿದ್ದಾರೆ.

‘‘ವಿಮಾನ ಪರಿಪೂರ್ಣವಾಗಿತ್ತು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’’ ಎಂದು ಅವರು ನುಡಿದರು.

‘‘ಯಾವುದೇ ತಾಂತ್ರಿಕ ಅಥವಾ ಮಾನವ ವೈಫಲ್ಯ ಸಂಭವಿಸಿಲ್ಲ’’ ಎಂದು ಬುಧವಾರ ರಾತ್ರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸೈಗೊಲ್ ಹೇಳಿದರು.

ಬುಧವಾರ ಸಂಜೆ ಗಿರಿಧಾಮ ವಲಯ ಚಿತ್ರಾಲ್ ಪಟ್ಟಣದಿಂದ ಹಾರಾಟ ಆರಂಭಿಸಿದ ವಿಮಾನ ಸ್ವಲ್ಪವೇ ಹೊತ್ತಿನಲ್ಲಿ ಹವೇಲಿಯನ್ ಪಟ್ಟಣದ ಸಮೀಪದ ಪರ್ವತದ ಬದಿಗೆ ಅಪ್ಪಳಿಸಿತು.

ವಿಮಾನವು ಇಳಿಯಬೇಕಾಗಿರುವ ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 50 ಕಿ.ಮೀ. ದೂರದಲ್ಲಿರುವಾಗ ದುರಂತ ಸಂಭವಿಸಿದೆ.

‘‘ತುರ್ತು ಅಪಾಯ ಸಂದೇಶ ಕಳುಹಿಸಿದ್ದ ಪೈಲಟ್ ವಿಮಾನವನ್ನು ಜನವಸತಿ ಪ್ರದೇಶಗಳಿಂದ ದೂರ ತಂದಿರುವ ಸಾಧ್ಯತೆಗಳಿವೆ’’ ಎಂದು ಸೈಗೊಲ್ ತಿಳಿಸಿದರು.

ಮೃತದೇಹಗಳನ್ನು ಹೆಲಿಕಾಪ್ಟರ್ ಮೂಲಕ ಇಸ್ಲಾಮಾಬಾದ್‌ಗೆ ತರಲಾಗಿದೆ.

1990ರ ದಶಕದಲ್ಲಿ ಪಾಕಿಸ್ತಾನದ ಜನಪ್ರಿಯ ಗಾಯಕರಾಗಿದ್ದು, ಬಳಿಕ ಧರ್ಮ ಪ್ರಚಾರಕರಾಗಿ ಪರಿವರ್ತನೆ ಹೊಂದಿದ ಜುನೈದ್ ಜಮ್ಶೆಡ್ ನತದೃಷ್ಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News