ಅಲೆಪ್ಪೊ ಜಯದಿಂದ ಆಂತರಿಕ ಯುದ್ಧ ಕೊನೆಗೊಳ್ಳುವುದಿಲ್ಲ : ಸಿರಿಯ ಅಧ್ಯಕ್ಷ

Update: 2016-12-08 15:28 GMT

ಬೆರೂತ್ (ಲೆಬನಾನ್), ಡಿ. 8: ಅಲೆಪ್ಪೊದ ನಿಯಂತ್ರಣಕ್ಕಾಗಿ ನಡೆದ ಕಾಳಗದಲ್ಲಿ ಸಿರಿಯದ ಸರಕಾರಿ ಪಡೆಗಳು ಗಳಿಸಿರುವ ವಿಜಯವು ದೊಡ್ಡ ಮುನ್ನಡೆಯಾಗಿದೆ ಎಂದು ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್ ಬಣ್ಣಿಸಿದ್ದಾರೆ. ಆದರೆ, ಇದರೊಂದಿಗೆ ದೇಶದ ಆಂತರಿಕ ಯುದ್ಧ ಮುಕ್ತಾಯಗೊಳ್ಳುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಬಂಡುಕೋರ ನಿಯಂತ್ರಣದ ಪೂರ್ವ ಅಲೆಪ್ಪೊದಲ್ಲಿ ಸರಕಾರಿ ಪಡೆಗಳು ಮತ್ತಷ್ಟು ಒಳಗೆ ನುಗ್ಗಿರುವಂತೆಯೇ, ಸಿರಿಯದ ಅಧ್ಯಕ್ಷರ ಈ ಹೇಳಿಕೆ ಹೊರಬಿದ್ದಿದೆ.

2012ರ ಬಳಿಕ ಅಲೆಪ್ಪೊ ನಗರದ ತಲಾ ಅರ್ಧ ಭಾಗಗಳ ನಿಯಂತ್ರಣಗಳನ್ನು ಸರಕಾರಿ ಪಡೆಗಳು ಮತ್ತು ಬಂಡುಕೋರ ಬಣಗಳು ಹೊಂದಿದ್ದವು. ಈಗ ಬಂಡುಕೋರ ನಿಯಂತ್ರಣದಲ್ಲಿರುವ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚಿನ ಪ್ರದೇಶಗಳನ್ನು ಸರಕಾರಿ ಪಡೆಗಳು ಮರಳಿ ವಶಕ್ಕೆ ಪಡೆದುಕೊಂಡಿವೆ.

ಮುತ್ತಿಗೆಗೊಳಗಾಗಿರುವ ಪೂರ್ವ ಅಲೆಪ್ಪೊದಲ್ಲಿರುವ ಸುಮಾರು 2,75,000 ಪ್ರಜೆಗಳ ಪೈಕಿ 30,000ಕ್ಕೂ ಅಧಿಕ ಮಂದಿ ಪಶ್ಚಿಮ ಅಲೆಪ್ಪೊಗೆ ಪಲಾಯನ ಮಾಡಿದ್ದಾರೆ.

ಈಗಲೂ ಬಂಡುಕೋರರ ನಿಯಂತ್ರಣದಲ್ಲಿರುವ ಅಲ್-ಸುಕ್ಕಾರಿ ಮತ್ತು ಕಲ್ಲಾಸೆಹ್ ಉಪನಗರಗಳಲ್ಲಿ ಭಾರೀ ಬಾಂಬ್ ದಾಳಿಗಳು ನಡೆಯುತ್ತಿವೆ ಎಂದು ಪ್ರತಿಪಕ್ಷ ಕಾರ್ಯಕರ್ತರು ಗುರುವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News