×
Ad

ಏಕಕಾಲದಲ್ಲಿ ತ್ರಿವಳಿ ತಲಾಖ್ ಕ್ರೌರ್ಯ: ಹೈಕೋರ್ಟ್

Update: 2016-12-08 23:54 IST

ಲಕ್ನೊ, ಡಿ.8: ತ್ರಿವಳಿ ತಲಾಖ್ ಅಥವಾ ಮುಸ್ಲಿಂ ಪುರುಷರು ಏಕಕಾಲದಲ್ಲಿ ಮೂರು ಬಾರಿ ‘ತಲಾಖ್’ ಎಂದು ಹೇಳಿ ಕೂಡಲೇ ವಿವಾಹ ವಿಚ್ಛೇದನ ಮಾಡುವುದು ‘ಕ್ರೌರ್ಯ’ ಹಾಗೂ ‘ರಾಕ್ಷಸೀಯತೆ’ ಎಂದು ಅಲಹಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರ ತಳೆದಿರುವ ನಿಲುವನ್ನು ಬೆಂಬಲಿಸಿ ಕಠಿಣ ಶಬ್ದಗಳಲ್ಲಿ ಹೇಳಿದೆ.

ಮುಸ್ಲಿಂ ಗಂಡ ನಿಂತ ಕಾಲಲ್ಲಿ ವಿಚ್ಛೇದನ ನೀಡುವ ಏಕಪಕ್ಷೀಯ ಅಧಿಕಾರವನ್ನು ಬೆಂಬಲಿಸುವುದು ಇಸ್ಲಾಮಿಕ್ ಕಾನೂನುಗಳನ್ವಯ ಸರಿಯಲ್ಲವೆಂದು ನ್ಯಾಯಾಲಯ ಕಳೆದ ತಿಂಗಳು ಮಾಡಿದ್ದ ಟೀಕೆ, ಇದೀಗ ಆನ್‌ಲೈನ್‌ನಲ್ಲಿ ಹಾಕಲಾಗಿದೆ.
ಈ ಕುರಿತಾದ 10 ಬೆಳವಣಿಗೆಗಳು ಇಲ್ಲಿವೆ
ಭಾರತದಲ್ಲಿ ಅನ್ವಯಿಸಲಾಗುತ್ತಿರುವ ಮುಸ್ಲಿಂ ಕಾನೂನು ಪ್ರವಾದಿ ಅಥವಾ ಪವಿತ್ರ ಕುರ್‌ಆನ್ ಹಾಕಿಕೊಟ್ಟಿರುವ ಸ್ಫೂರ್ತಿಗೆ ವಿರುದ್ಧ ದಾರಿ ಹಿಡಿದಿದೆ. ಇದೇ ತಪ್ಪು ಕಲ್ಪನೆಯು ಪತ್ನಿಯು ಪಡೆದಿರುವ ವಿಚ್ಛೇದನದ ಹಕ್ಕಿನ ಕುರಿತಾದ ಕಾನೂನನ್ನೂ ಭ್ರಷ್ಟಗೊಳಿಸಿದೆಯೆಂದು ನ್ಯಾಯಮೂರ್ತಿ ಸುನೀತ್‌ಕುಮಾರ್ ಹೇಳಿದ್ದಾರೆ.
ಯಾವುದೇ ಸಮುದಾಯದ ವೈಯಕ್ತಿಕ ಕಾನೂನು ಸಂವಿಧಾನವು ಜನರಿಗೆ ನೀಡಿರುವ ಹಕ್ಕುಗಳಿಗಿಂತ ಶ್ರೇಷ್ಠವೆಂದು ಪ್ರತಿಪಾದಿಸಲಾಗದು. ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿರುವುದರಿಂದ ಇನ್ನಷ್ಟು ಹೆಚ್ಚು ಹೇಳಲು ತಾನು ಬಯಸುವುದಿಲ್ಲವೆಂದು ಹೈಕೋರ್ಟ್ ತಿಳಿಸಿದೆ.
23ರ ಹರೆಯದ ಹೀನಾ ಎಂಬಾಕೆಯನ್ನು ವಿವಾಹವಾಗಲು ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದ 30ರ ಹರೆಯದ ಆಕೆಯ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತ್ರಿವಳಿ ತಲಾಖನ್ನು ಪ್ರಶ್ನಿಸಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. ತಮಗೆ ಫೇಸ್‌ಬುಕ್, ಸ್ವೈಪ್ ಹಾಗೂ ವಾಟ್ಸ್‌ಆ್ಯಪ್‌ಗಳ ಮೂಲಕ ವಿಚ್ಛೇದನ ನೀಡಲಾಗುತ್ತಿದೆಯೆಂದು ಮುಸ್ಲಿಂ ಮಹಿಳೆಯರು ಅರ್ಜಿಗಳಲ್ಲಿ ಆರೋಪಿಸಿದ್ದಾರೆ.
ತ್ರಿವಳಿ ತಲಾಖ್, ಸಂವಿಧಾನ ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಹಾಗೂ ಅದು ಇಸ್ಲಾಂನ ‘ಅಗತ್ಯದ ಮತೀಯ ಪದ್ಧತಿಯಾಗಿಲ್ಲ’ ವೆಂದು ಸರಕಾರವು ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಮಹಿಳೆಯರ ವಿರುದ್ಧ ಯಾವುದೇ ದೌರ್ಜನ್ಯ ಅಥವಾ ತಾರತಮ್ಯವನ್ನು ಮತೀಯ ನೆಲೆಯಲ್ಲಿ ಮಾಡಬಾರದೆಂದು ತನ್ನ ಸರಕಾರ ಸ್ಪಷ್ಟಪಡಿಸಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತ್ರಿವಳಿ ತಲಾಖ್‌ನ ಬಗ್ಗೆ ದಾರಿ ತಪ್ಪಿಸಲು ಬಯಸುತ್ತಿರುವವರು ಜನರನ್ನು ಪ್ರಚೋದಿಸುತ್ತಿದ್ದಾರೆ. ದೇಶದಲ್ಲಿ ಮುಸ್ಲಿಂ ಮಹಿಳೆಯರ ಜೀವನವನ್ನು ತ್ರಿವಳಿ ತಲಾಖ್‌ನ ಮೂಲಕ ನಾಶಗೊಳಿಸಲು ಅವಕಾಶವಿಲ್ಲವೆಂದು ಅವರು ಉತ್ತರಪ್ರದೇಶದಲ್ಲಿ ರ್ಯಾಲಿಯೊಂದರಲ್ಲಿ ಸ್ಪಷ್ಟಪಡಿಸಿದ್ದರು.
ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಿಗೆ ತಮ್ಮದೇ ಆದ ನಾಗರಿಕ ಸಂಹಿತೆಯ ಮೂಲಕ(ವೈಯಕ್ತಿಕ ಕಾನೂನು) ವಿವಾಹ, ವಿಚ್ಛೇದನ ಹಾಗೂ ವಾರಸುದಾರಿಕೆಯನ್ನು ನಿಯಂತ್ರಿಸಲು ಅವಕಾಶ ನೀಡುತ್ತದೆ.
ಯಾವುದೇ ನ್ಯಾಯಾಲಯದ ಮಧ್ಯಪ್ರವೇಶವನ್ನು ಪ್ರಬಲವಾಗಿ ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು, ಸಂವಿಧಾನದ ಖಾತ್ರಿಗಳನ್ನು ಕೆಡಿಸಬಾರದು ಹಾಗೂ ಯಾವುದೇ ನ್ಯಾಯಾಲಯ ಶರಿಯಾ ಕಾನೂನನ್ನು ಬದಲಿಸುವಂತಿಲ್ಲ ಎಂದಿದೆ.
ಬಹುಪತ್ನಿತ್ವ, ಏಕಪಕ್ಷೀಯ ವಿಚ್ಛೇದನ ಹಾಗೂ ಬಾಲ್ಯವಿವಾಹಗಳನ್ನು ಅಪರಾಧವನ್ನಾಗಿ ಮಾಡುವ ಖಚಿತ ಕಾನೂನೊಂದಕ್ಕಾಗಿ ಮಹಿಳಾ ಹಕ್ಕು ಕಾರ್ಯಕರ್ತರು ದೀರ್ಘ ಸಮಯದಿಂದ ಒತ್ತಾಯಿಸುತ್ತಿದ್ದಾರೆ. ವಿಚ್ಛೇದನದ ಬಳಿಕ ಪುನಃ ಹಳೆಯ ಗಂಡನ ಬಳಿಗೆ ಹೋಗಲಿಚ್ಛಿಸುವ ಮಹಿಳೆ ಮೊದಲು ಕಡ್ಡಾಯವಾಗಿ ಬೇರೊಬ್ಬನನ್ನು ಮದುವೆಯಾಗಬೇಕೆಂದು ವಿಧಿಸುವ ‘ಹಲಾಲಾ’ ಪದ್ಧತಿಯನ್ನು ಅಂತ್ಯಗೊಳಿಸುವಂತೆಯೂ ಅವರು ಆಗ್ರಹಿಸುತ್ತಿದ್ದಾರೆ.
ಸರ್ವಾನುಮತಿಯ ಹೊರತಾಗಿ ಸಮಾನ ನಾಗರಿಕ ಸಂಹಿತೆಯನ್ನು ಹಿಂಬಾಗಿಲ ಮೂಲಕ ಜಾರಿಗೊಳಿಸುವುದಿಲ್ಲವೆಂದು ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News