×
Ad

ಸೇನೆಯ ವಿರುದ್ಧ ಆರೋಪ: ಮಮತಾಗೆ ತನ್ನ ನೋವು ವ್ಯಕ್ತಪಡಿಸಿದ ಪಾರಿಕ್ಕರ್

Update: 2016-12-09 17:47 IST

ಹೊಸದಿಲ್ಲಿ,ಡಿ.9: ಪ.ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಗುರುವಾರ ಕಟುವಾದ ಶಬ್ದಗಳಲ್ಲಿ ಪತ್ರವೊಂದನ್ನು ಬರೆದಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಇತ್ತೀಚಿಗೆ ರಾಜ್ಯದ ಟೋಲ್ ಗೇಟ್‌ಗಳಲ್ಲಿ ನಿಯೋಜನೆಗಾಗಿ ಸೇನೆಯ ವಿರುದ್ಧ ಅವರು ಮಾಡಿರುವ ಆರೋಪಗಳ ಕುರಿತಂತೆ ತನ್ನ ತೀವ್ರ ನೋವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಆರೋಪಗಳು ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಹೇಳಿದ್ದಾರೆ.ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಪರಸ್ಪರರ ವಿರುದ್ಧ ಬೇಕಾಬಿಟ್ಟಿ ಆರೋಪಗಳನ್ನು ಮಾಡಿ ಸುಖಪಡಬಹುದು, ಆದರೆ ಸಶಸ್ತ್ರ ಪಡೆಗಳ ಬಗ್ಗೆ ಪ್ರಸ್ತಾಪಿಸುವಾಗ ಅತ್ಯಂತ ಎಚ್ಚರಿಕೆ ಅಗತ್ಯವಾಗಿದೆ ಎಂದು ಪಾರಿಕ್ಕರ್ ಕಿವಿಮಾತು ಹೇಳಿದ್ದಾರೆ.

ನಿಮ್ಮ ಆರೋಪಗಳು ದೇಶದ ಸಶಸ್ತ್ರ ಪಡೆಗಳ ನನೈತಿಕ ಸ್ಥೈರ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಅಪಾಯವಿದೆ. ನಿಮ್ಮಂತಹ ಘನತೆಯ ಮತ್ತು ಸಾರ್ವಜನಿಕ ಜೀವನದಲ್ಲಿ ಅನುಭವ ಹೊಂದಿರುವ ವ್ಯಕ್ತಿಯಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಕೇಂದ್ರದ ನೋಟು ನಿಷೇಧ ಕ್ರಮವನ್ನು ವಿರೋಧಿಸುತ್ತಿರುವ ಮಮತಾ, ಅದು ರಾಜ್ಯ ಸರಕಾರಕ್ಕೆ ಮಾಹಿತಿ ನೀಡದೆ ಪ.ಬಂಗಾಲದ ಟೋಲ್ ಪ್ಲಾಝಾಗಳಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಎಂದು ಆರೋಪಿಸಿದ್ದರಲ್ಲದೆ, ಇದೊಂದು ಹಿಂದೆಂದೂ ಕಂಡಿರದ ಮತ್ತು ತುರ್ತು ಪರಿಸ್ಥಿತಿಗಿಂತ ಕೆಟ್ಟ ಸನ್ನಿವೇಶವಾಗಿದೆ ಎಂದು ಬಣ್ಣಿಸಿದ್ದರು.

 ಟೋಲ್ ಪ್ಲಾಝಾಗಳ ಮೂಲಕ ಸಂಚರಿಸುವ ಘನ ವಾಹನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸೇನೆಯ ಕಾರ್ಯಾಚರಣೆಯ ಕುರಿತಂತೆ ಇಂತಹ ವಿವಾದವು ಅನಗತ್ಯವಾಗಿತ್ತು ಎಂದಿರುವ ಪಾರಿಕ್ಕರ್, ಇದು ಸೇನೆಯು ದೇಶಾದ್ಯಂತ ಹಲವಾರು ವರ್ಷಗಳಿಂದ ನಡೆಸುತ್ತಿರುವ ಕಾರ್ಯಾಚರಣೆಯಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News