ಪ್ಲಾಸ್ಟಿಕ್ ಕರೆನ್ಸಿ ನೋಟು ಚಲಾವಣೆಗೆ ಸಿದ್ಧತೆ ಆರಂಭ
ಹೊಸದಿಲ್ಲಿ, ಡಿ.9: ಶೀಘ್ರವೇ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಉಪಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದು ಸಂಸತ್‌ಗೆ ತಿಳಿಸಲಾಗಿದೆ.
ಪ್ಲಾಸ್ಟಿಕ್ ಅಥವಾ ಪಾಲಿಮರ್ ಬಳಸಿ ಬ್ಯಾಂಕ್ ನೋಟುಗಳನ್ನು ಪ್ರಿಂಟ್ ಮಾಡಲು ನಿರ್ಧರಿಸಲಾಗಿದೆ. ಈ ಕುರಿತ ಸಿದ್ದತೆಗಳನ್ನು ಆರಂಭಿಸಲಾಗಿದೆ ಎಂದು ವಿತ್ತ ಇಲಾಖೆಯ ಉಪಸಚಿವ ಅರ್ಜುನ್‌ರಾಮ್ ಮೇಘ್‌ವಾಲ್ ಲೋಕಸಭೆಯಲ್ಲಿಂದು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.
ಭದ್ರತೆಯ ಎಳೆ (ಸೆಕ್ಯುರಿಟಿ ಥ್ರೆಡ್) ಇಲ್ಲದ 1 ಸಾವಿರ ರೂ. ಮುಖಬೆಲೆಯ ಕೆಲವು ನೋಟುಗಳು ತನ್ನ ಕೈಸೇರಿವೆ. ಇವನ್ನು ನಾಶಿಕ್‌ನ ನೋಟು ಮುದ್ರಣಾಲಯದಲ್ಲಿ , ಹೊಶಂಗಾಬಾದ್‌ನ ಸೆಕ್ಯುರಿಟಿ ಪೇಪರ್ ಮಿಲ್‌ನವರು ಒದಗಿಸಿದ ಪೇಪರ್ ಬಳಸಿ ಪ್ರಿಂಟ್ ಮಾಡಲಾಗಿದೆ ಎಂದು 2015ರ ಡಿಸೆಂಬರ್‌ನಲ್ಲಿ ರಿಸರ್ವ್ ಬ್ಯಾಂಕ್ ತಿಳಿಸಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ತಿಳಿಸಿದರು. ಈ ಕುರಿತು ತನಿಖೆ ಜಾರಿಯಲ್ಲಿದೆ. ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು ಇಲಾಖಾ ನಿಯಮಗಳನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯವಿಧಾನದ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಉತ್ಪಾದನಾ ಪ್ರಕ್ರಿಯೆಯ ಸಂದರ್ಭ ಅಂತರ್ಜಾಲ ಆಧರಿತ ನಿರೀಕ್ಷಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ ಮತ್ತು ಸಂಬಂಧಿತ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಭವಿಷ್ಯದಲ್ಲಿ ಈ ರೀತಿಯ ತಪ್ಪುಗಳಾಗದಂತೆ ಎಚ್ಚರ ವಹಿಸಲಾಗಿದೆ . ದೋಷರಹಿತ ಉತ್ಪಾದನೆಯ ನಿಟ್ಟಿನಲ್ಲಿ ಹೆಚ್ಚುವರಿ ನಿರೀಕ್ಷಣಾ ವ್ಯವಸ್ಥೆ ಮಾಡಲಾಗಿದೆ ಎಂದರು.
10 ರೂ. ಮುಖಬೆಲೆಯ ಒಂದು ಬಿಲಿಯನ್ ಪ್ಲಾಸ್ಟಿಕ್ ನೋಟುಗಳನ್ನು ಪ್ರಯೋಗಾರ್ಥವಾಗಿ ಕೊಚ್ಚಿ, ಮೈಸೂರು, ಜೈಪುರ, ಶಿಮ್ಲ ಮತ್ತು ಭುವನೇಶ್ವರ ನಗರಗಳಲ್ಲಿ ಚಲಾವಣೆಗೆ ತರಲಾಗುವುದು ಎಂದು 2014ರ ಫೆಬ್ರವರಿಯಲ್ಲಿ ಸರಕಾರ ಸಂಸತ್‌ನಲ್ಲಿ ತಿಳಿಸಿತ್ತು. ಪ್ಲಾಸ್ಟಿಕ್ ನೋಟುಗಳ ಸರಾಸರಿ ಜೀವಿತಾವಧಿ ಐದು ವರ್ಷ ಮತ್ತು ಇವನ್ನು ಸುಲಭವಾಗಿ ನಕಲು ಮಾಡಲಾಗದು. ಅಲ್ಲದೆ ಪ್ಲಾಸ್ಟಿಕ್ ನೋಟುಗಳು ಕಾಗದದ ನೋಟುಗಳಿಗಿಂತ ಸ್ವಚ್ಛವಾಗಿರುತ್ತವೆ. ಖೋಟಾನೋಟುಗಳ ಹಾವಳಿ ತಡೆಗಟ್ಟುವ ಉದ್ದೇಶದಿಂದ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು.