ಅಡಿಕೆ ಬೆಳೆಗಾರರಿಗೆ ಕೇಂದ್ರದ ಪ್ರೋತ್ಸಾಹಕ ಕ್ರಮ ಘೋಷಣೆ : ಸಂಸದೆ ಶೋಭಾ ಕರಂದ್ಲಾಜೆ

Update: 2016-12-09 17:39 GMT

ಉಡುಪಿ, ಡಿ.9: ಅನಾವೃಷ್ಟಿ, ಬೆಲೆಯಲ್ಲಿ ಅಸ್ಥಿರತೆ, ಮಧ್ಯವರ್ತಿಗಳ ಹಾವಳಿ ಮೊದಲಾದ ಸಂಕಷ್ಟಗಳಿಂದ ಕಂಗೆಟ್ಟಿದ್ದ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂತಸ ನೀಡುವ ಪ್ರೋಔತ್ಸಾಹ ಕ್ರಮಗಳನ್ನು ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಅಡಿಕೆಗೆ ಸೂಕ್ತ ಪ್ರೋತ್ಸಾಹಕ ಕ್ರಮಗಳನ್ನು 2016ನೇ ಸೀಸನ್‌ಗೆ ಸೀಮಿತಗೊಳಿಸಿ ಜಾರಿಗೆ ತರಲಾಗಿದೆ. ಇದರಿಂದ ಅತೀ ಹೆಚ್ಚಿನ ಅಡಿಕೆ ಬೆಳೆಗಾರರಿರುವ ತನ್ನ ಲೋಕಸಭಾ ಕ್ಷೇತ್ರದ ಅಡಿಕೆ ಬೆಳೆಗಾರರೂ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲಿರುವ ಅಡಿಕೆ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎಂದು ಶೋಭಾ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

  ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯು ಇದೇ ಡಿ.7ರಿಂದ 31ರವರೆಗಿನ ಅವಧಿಯಲ್ಲಿ ಜಾರಿಯಲ್ಲಿದ್ದು, ಗರಿಷ್ಠ 40ಸಾವಿರ ಮೆಟ್ರಿಕ್ ಟನ್ (28 ಸಾವಿರ ಚಾಲಿ ಅಡಿಕೆ ಮತ್ತು 12 ಸಾವಿರ ಕೆಂಪಡಿಕೆ)ಅಡಿಕೆಯನ್ನು ರಾಜ್ಯದ ಎಜನ್ಸಿಯ ಮೂಲಕ ಖರೀದಿಸಬಹುದಾಗಿದೆ.

ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆಯು ಅನುಕ್ರಮವಾಗಿ ಚಾಲಿ ಅಡಿಕೆಗೆ ಕ್ವಿಂಟಾಲೊಂದಕ್ಕೆ ರೂ.25,100 ಹಾಗೂ ಕೆಂಪಡಿಕೆಗೆ ಕ್ವಿಂಟಾಲೊಂದಕ್ಕೆ ರೂ. 27,000 ಆಗಿದ್ದು, ಜೊತೆಗೆ ಮೇಲ್ವೆಚ್ಚ ಚಾಲಿ ಅಡಿಕೆಗೆ ಕ್ವಿಂಟಾಲೊಂದಕ್ಕೆ ರೂ. 6275 ಮತ್ತು ಕೆಂಪಡಿಕೆಗೆ ರೂ 6750 ಆಗಿರುತ್ತದೆ. ಈ ಮೇಲ್‌ವೆಚ್ಚದಲ್ಲಿ ಖರೀದಿ ತೆರಿಗೆ, ಮಂಡಿ ತೆರಿಗೆ, ಗೋದಾಮು ವೆಚ್ಚಗಳು, ಪ್ಯಾಕಿಂಗ್ ಸಾಮಗ್ರಿ, ಲೋಡಿಂಗ್/ಅನ್‌ಲೋಡಿಂಗ್, ಕಮಿಷನ್, ಸಾಗಾಟವೆಚ್ಚ, ಗ್ರೇಡಿಂಗ್‌ವೆಚ್ಚ, ಪ್ಯಾಕಿಂಗ್ ವೆಚ್ಚಗಳೇ ಮೊದಲಾದವು ಒಳಗೊಳ್ಳಲಿವೆ.

ಈ ಅವಧಿಯಲ್ಲಿ ಉಂಟಾಗುವ ನಷ್ಟವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮಾನವಾಗಿ 50:50 ಅನುಪಾತದಲ್ಲಿ ಭರಿಸಬೇಕಾಗುವುದು, ಬಿಟ್ಟು ನಷ್ಟವನ್ನು ಖರೀದಿ ವೆಚ್ಚದ 25ಕ್ಕೆ ಸೀಮಿತಗೊಳಿಸಲಾಗಿದೆ. ಅಧಿಕೃತ ಎಜನ್ಸಿಗಳು ಈ ಯೋಜನೆಯಡಿ ಖರೀದಿಸಿದ ಅಡಿಕೆಯನ್ನು ಗರಿಷ್ಠ ಸಾಧ್ಯವಾದ ದರದಲ್ಲಿ ಮಾರಾಟ ಮಾಡುವ ಮೂಲಕ ಸರಕಾರದ ಖಾತೆಗೆ ಉಂಟಾಗುವ ನಷ್ಠವನ್ನು ಕಡಿಮೆ ಮಾಡಬೇಕಾಗಿದೆ.

ದಕ್ಷಿಣ ಕನ್ನಡದ ಕಾಂಪ್ಕೋ, ಶಿವಮೊಗ್ಗದ ಮ್ಯಾಮ್ಕೋಸ್, ಸಾಗರದ ಟಿಎಪಿಸಿಎಂಎಸ್ ಮತ್ತು ಆಪ್ಕೋಸ್, ಶಿರಸಿ ತೋಟಗಾರರ ಮಾರಾಟ ಸಹಕಾರಿ ಸಂಘಗಳ ಮೂಲಕ ಈ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯು ಅನುಷ್ಠಾನಗೊಳ್ಳಲಿದೆ. ಅಡಿಕೆಯನ್ನು ಸಹಕಾರಿ ಸಂಘಗಳು, ರೈತರ ಸಂಘಗಳು ಮತ್ತು ರೈತರಿಂದ ನೇರವಾಗಿ ಖರೀದಿಸಲಾಗುವುದು. ಮಧ್ಯವರ್ತಿಗಳಿಗೆ ಈ ಯೋಜನೆಯಿಂದ ದೂರ ಇರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಮತ್ತು ಏಜನ್ಸಿಗಳು ತಮ್ಮ ಖರೀದಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಿರ್ವಹಿಸುವಂತೆ ಕೇಂದ್ರದ ಆದೇಶದಲ್ಲಿ ತಿಳಿಸಲಾಗಿದೆ.

ಅನುಷ್ಠಾನ ಏಜೆನ್ಸಿಗಳು ತಂತಮ್ಮ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿ ಯೋಜನೆಯ ಮುಕ್ತಾಯದ ಮೂರು ತಿಂಗಳುಗಳೊಳಗೆ ತಮ್ಮ ಲೆಕ್ಕ ಪರಿಶೋಧಿತ ಲೆಕ್ಕಪತ್ರಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕಾಗುವುದು ಹಾಗೂ ಈ ಏಜೆನ್ಸಿಗಳಿಗೆ ಅಗತ್ಯವಿರುವ ಕೆಲಸದ ಬಂಡವಾಳವನ್ನು ಹೊಂದಿಸಿಕೊಳ್ಳಲು ನೆರವು ನೀಡುವಂತೆ ರಾಜ್ಯಸರಕಾರಕ್ಕೆ ಆದೇಶದಲ್ಲಿ ತಿಳಿಸಲಾಗಿದೆ ಎಂದು ಶೋಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News