ಡಿ.12-18: ‘ರಂಗ ಸುರಭಿ’ ರಾಜ್ಯಮಟ್ಟದ ನಾಟಕ ಸಪ್ತಾಹ

Update: 2016-12-09 18:38 GMT

ಉಡುಪಿ, ಡಿ.9: ಬೈಂದೂರು ಸುರಭಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ರಂಗ ಸುರಭಿ’ ರಾಜ್ಯಮಟ್ಟದ ನಾಟಕ ಸಪ್ತಾಹವನ್ನು ಡಿ.12ರಿಂದ 18ರವರೆಗೆ ಪ್ರತಿದಿನ ಸಂಜೆ 6ಕ್ಕೆ ಬೈಂದೂರಿನ ಶ್ರೀಶಾರದಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.

12ರಂದು ಸಪ್ತಾಹವನ್ನು ಸಾಹಿತಿ ವೈದೇಹಿ ಉದ್ಘಾಟಿಸಲಿದ್ದು, 2 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುರಭಿ ಕಲಾಗ್ರಾಮದ ಶಿಲಾನ್ಯಾಸವನ್ನು ಸಚಿವೆ ಉಮಾಶ್ರೀ 15ರಂದು ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಗೋಪಾಲ ಪೂಜಾರಿ ವಹಿಸಲಿರುವರು ಎಂದು ಸುರಭಿ ನಿರ್ದೇಶಕ ಸುಧಾಕರ ಪಿ.ಬೈಂದೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

12ರಂದು ಪ್ರಸಂಗ ಬೆಂಗಳೂರು ತಂಡದಿಂದ ‘ಅನಭಿಜ್ಞ ಶಾಕುಂತಲ’, 13ರಂದು ರಂಗ ಮಂಟಪ ಬೆಂಗಳೂರು ತಂಡದಿಂದ ‘ಮಲ್ಲಿಗೆ’, 14ರಂದು ರಂಗಪಯಣ ಬೆಂಗಳೂರು ತಂಡದಿಂದ ‘ಚಂದ್ರಗಿರಿ ತೀರದಲ್ಲಿ’, 15ರಂದು ರಂಗಭೂಮಿ ಉಡುಪಿ ತಂಡದಿಂದ ‘ರೂಪ ರೂಪಗಳನು ದಾಟಿ’, 16ರಂದು ಅನನ್ಯ ಬೆಂಗಳೂರು ತಂಡದಿಂದ ‘ಅತೀತ’, 17ರಂದು ಪ್ರಕಸಂ ಬೆಂಗಳೂರು ತಂಡದಿಂದ ‘ಮಹಾಪೀಡೆ ಮಹಾಬ್ಲು’, 18ರಂದು ನೃತ್ಯ ನಿಕೇತನ ಕೊಡವೂರು ತಂಡದಿಂದ ‘ಚಿತ್ರಾ’ ನಾಟಕ ಪ್ರದರ್ಶನಗೊಳ್ಳಲಿವೆ.

ಪ್ರತಿದಿನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಂಗನಿರ್ದೇಶಕರು ಹಾಗೂ ರಂಗಕರ್ಮಿಗಳನ್ನು ಸನ್ಮಾನಿಸಲಾಗುವುದು. 18ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಂಗ ನಿರ್ದೇಶಕ ಡಾ.ಶ್ರೀಪಾದ್ ಭಟ್ ಶಿರಸಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.

ಅಧ್ಯಕ್ಷ ಶಿವರಾಮ ಕೊಠಾರಿ ಯಡ್ತರೆ, ನಿರ್ದೇಶಕ ಗಣಪತಿ ಹೋಬಳಿದಾರ್, ಸದಸ್ಯರಾದ ಮಂಜುನಾಥ್ ನಾಯಕ್, ಸುನೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News