ಮಗು ಅಪಹರಣ ಪ್ರಕರಣ: ಓರ್ವ ಆರೋಪಿ ಪೊಲೀಸ್ ಕಸ್ಟಡಿಗೆ

Update: 2016-12-09 18:39 GMT

ಉಪ್ಪಿನಂಗಡಿ, ಡಿ.9: ಮಗು ಅಪಹರಣ ಪ್ರಕರಣದಡಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿ ರುವ ಮೂವರು ಆರೋಪಿಗಳ ಪೈಕಿ ಓರ್ವ ಆರೋಪಿಯನ್ನು ಹೆಚ್ಚಿನವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ನಡುವೆ ಆರೋಪಿಗಳು ನೀಡಿರುವ ಹೇಳಿಕೆಯನ್ನಾಧರಿಸಿ ಮಗುವಿನ ಮೂಲ ತಂದೆ-ತಾಯಿಯ ಪತ್ತೆಗಾಗಿ ಪೊಲೀಸರ ತಂಡವೊಂದು ಬೆಂಗಳೂರಿಗೆ ತೆರಳಿದೆ.

ಕಳೆದ ನ.28ರಂದು ಪೆರ್ನೆಯ ಬಾಡಿಗೆ ಮನೆಯೊಂದರಲ್ಲಿ ಹಸುಗೂಸನ್ನು ಸಾಕಲೆತ್ನಿಸಿದ ಆರೋಪಿಗಳಾದ ಬೆಂಗಳೂರು ಎಚ್.ಬಿ.ಆರ್. ಲೇಔಟ್‌ನ ಹೆಣ್ಣೂರು ನಿವಾಸಿ ಮುಹಮ್ಮದ್ ಉಜೈಫ್, ಹಿರೇಬಂಡಾಡಿ ಪೆರಾಬೆಯ ಶಿಹಾಬುದ್ದೀನ್ ಅಹ್ಮದ್ ಹಾಗೂ ಕೋಲಾಡಿ ನಿವಾಸಿ ಮುಹಮ್ಮದ್ ಶಬೀರ್ ಎಂಬವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ ಆರೋಪಿಗಳು ಮಗುವಿನ ತಂದೆಯನ್ನು ಕರೆಸುವುದಾಗಿ ಹೇಳಿಕೆ ನೀಡಿದ್ದರಿಂದ ಒಂದು ದಿನ ಕಾದ ಪೊಲೀಸರು ಬಳಿಕವೂ ಮಗುವಿನ ತಂದೆ ಬಾರದಿದ್ದಾಗ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 363, 373ರಡಿ ಅಕ್ರಮ ಮಾನವ ಕಳ್ಳಸಾಗಾಟ ಸೇರಿದಂತೆ ಇತರ ಪ್ರಕರಣ ದಾಖಲಿಸಿ, ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತು. ಆದರೆ ವಾರ ಕಳೆದರೂ ಮಗುವಿನ ತಂದೆ-ತಾಯಿಯೆನ್ನಲಾದ ಜಲಾಲುದ್ದೀನ್ ಹಾಗೂ ಕರೀಷ್ಮಾ ಬಾರದಿದ್ದ ಕಾರಣ ಆಸ್ಪತ್ರೆಯಲ್ಲಿ ಮಗುವಿನ ಹೆರಿಗೆಯ ಸಂದಭರ್ ನೀಡಿರುವ ಜನನ ದಾಖಲೆಯ ಬಗ್ಗೆ ಪರಿಶೀಲನೆ ನಡೆಸಲು ಪೊಲೀಸರ ತಂಡವೊಂದು ಬೆಂಗಳೂರಿಗೆ ತೆರಳಿದೆ. ಅಲ್ಲದೆ, ಹೆಚ್ಚಿನ ತನಿಖೆಗಾಗಿ ಆರೋಪಿಗಳಲ್ಲೋರ್ವನಾದ ಮುಹಮ್ಮದ್ ಉಜೈಫ್‌ನನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News