×
Ad

" ನೋಟು ರದ್ದತಿ ಸಂಪೂರ್ಣ ವಿಫಲ" : ಆರೆಸ್ಸೆಸ್ ಕಾರ್ಮಿಕ ಸಂಘ ಬಿಎಂಎಸ್

Update: 2016-12-10 19:31 IST

ಹೊಸದಿಲ್ಲಿ,ಡಿ.10: 500 ಮತ್ತು 1,000 ರೂ.ಗಳ ನೋಟುಗಳನ್ನು ಯಾವುದೇ ಪೂರ್ವಸಿದ್ಧತೆಗಳಿಲ್ಲದೇ ದಿಢೀರ್‌ನೆ ನಿಷೇಧಿಸಿದ ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ಕಟುವಾಗಿ ಟೀಕಿಸಿರುವ ಆರೆಸ್ಸೆಸ್‌ನ ಕಾರ್ಮಿಕ ಘಟಕ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ದ ಅಧ್ಯಕ್ಷ ಬೈಜನಾಥ ರಾಯ್ ಅವರು, ನೋಟು ರದ್ದತಿ ಪ್ರಕ್ರಿಯೆಯು ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಬೆಳವಣಿಗೆಯು ತೀವ್ರವಾಗಿ ಕುಂಠಿತಗೊಂಡಿದೆ ಮತ್ತು ನೋಟು ರದ್ದತಿಗೊಂಡ ಒಂದು ತಿಂಗಳಲ್ಲಿ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿದೆ. ಸರಕಾರದ ಈ ಕ್ರಮದಿಂದಾಗಿ ದಿನಗೂಲಿ ಕಾರ್ಮಿಕರು ಅತ್ಯಂತ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಸದ್ಯ ಕೇರಳ ಪ್ರವಾಸದಲ್ಲಿರುವ ರಾಯ್ ಆಂಗ್ಲ ಸುದ್ದಿ ಜಾಲತಾಣದೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನೋಟು ರದ್ದತಿ ಕ್ರಮ ಖಂಡಿತವಾಗಿಯೂ ಆರ್ಥಿಕತೆಗೆ ಉತ್ತಮ ಹೆಜ್ಜೆಯಾಗಿದೆ. ಆದರೆ ಸುದೀರ್ಘ ಕಾಲದ ನಂತರವೇ ಫಲ ನೀಡುತ್ತದೆ. ಕಳೆದೊಂದು ತಿಂಗಳಲ್ಲಿ ಈ ಕ್ರಮದಿಂದ ಜನಸಾಮಾನ್ಯರು ಹೇಗೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎನ್ನುವುದನ್ನು ಮಾತ್ರ ನಾವು ಕಾಣುತ್ತಿದ್ದೇವೆ ಎಂದರು.

ದೇಶಾದ್ಯಂತ ಜನರು ಹಣಕ್ಕಾಗಿ ಸರದಿ ಸಾಲುಗಳಲ್ಲಿ ನಿಂತಿದ್ದಾರೆ. ಇದು ನೋಟು ರದ್ದತಿ ನಿರ್ಧಾರವನ್ನು ಕೈಗೊಂಡವರ ಪೂರ್ವಸಿದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಒಂದು ತಿಂಗಳಾದರೂ ದೇಶವಿನ್ನೂ ಸಹಜಸ್ಥಿತಿಗೆ ಮರಳಿಲ್ಲ. ಇದು ಕ್ರಮದ ಅನುಷ್ಠಾನದ ಬಗ್ಗೆಯೂ ಹಲವರು ಪ್ರಶ್ನೆಗಳನ್ನು ಸೃಷ್ಟಿಸಿದೆ ಎಂದ ಅವರು, ಸರಕಾರವು ಇಷ್ಟೊಂದು ಬೃಹತ್ ಪ್ರಮಾಣದ ಯೋಜನೆಯನ್ನು ಪ್ರಕಟಿಸುವ ಮುನ್ನ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಆದರೆ ದೇಶಾದ್ಯಂತ ನಡೆಯುತ್ತಿರುವುದನ್ನು ನೋಡಿದರೆ ಅಂತಹ ಯಾವುದೇ ಪೂರ್ವಸಿದ್ಧತೆಗಳು ಆಗಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇಂತಹ ಕ್ರಮವು ಉಂಟು ಮಾಡಬಹುದಾದ ತೊಂದರೆಗಳನ್ನು ಮೊದಲೇ ಅಂದಾಜಿಸುವಲ್ಲಿ ಸರಕಾರವು ವಿಫಲಗೊಂಡಿದೆ ಎಂದರು.

ಪೂರ್ವ ಸಿದ್ಧತೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಜನರು ಹಳೆಯ ನೋಟುಗಳನ್ನು ತಮ್ಮ ಖಾತೆಗಳಲ್ಲಿ ಜಮೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ ಖಾತೆಗಳನ್ನು ಅದು ತೆರೆಸಬೇಕಿತ್ತು. ಮುಖ್ಯವಾಗಿ,ಬ್ಯಾಂಕುಗಳು ಇಷ್ಟೊಂದು ಅಗಾಧ ಸವಾಲನ್ನು ಎದುರಿಸಲು ಸಜ್ಜಾಗಿವೆಯೇ ಎನ್ನುವದನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು ಎಂದರು.

ಅತ್ಯಂತ ಸಂಕಷ್ಟಕ್ಕೊಳಗಾದವರು ಬ್ಯಾಂಕ್ ಖಾತೆಗಳನ್ನು ಹೊಂದಿರದ ದಿನಗೂಲಿ ಕಾರ್ಮಿಕರು ಎಂದ ಅವರು, ಸರಕಾರವು ಇವನ್ನೆಲ್ಲ ಸಂಪೂರ್ಣವಾಗಿ ಕಡೆಗಣಿಸಿದೆ. ನೋಟು ರದ್ದತಿ ಕ್ರಮದ ಉದ್ದೇಶವನ್ನು ತಾನು ಶಂಕಿಸುತ್ತಿಲ್ಲವಾದರೂ ಅನುಷ್ಠಾನ ಮಾತ್ರ ನಿರೀಕ್ಷಿತ ರೀತಿಯಲ್ಲಿ ಎಂದರು.

ಕಳೆದ ಮೂರು ವರ್ಷಗಳಲ್ಲಿ 20 ಲಕ್ಷಕ್ಕೂ ಅಧಿಕ ಉದ್ಯೋಗಗಳು ನಷ್ಟಗೊಂಡಿವೆ ಮತ್ತು ಈ ಅವಧಿಯಲ್ಲಿ ಕೇವಲ 1,35,000 ಉದ್ಯೋಗಳು ಸೃಷ್ಟಿಯಾಗಿವೆ. ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಹೇಳಬೇಕಾದರೆ ಅಸಂಘಟಿತ ಕ್ಷೇತ್ರದಲ್ಲಿಯ ಜನರು ತೀವ್ರ ಬಾಧಿತರಾಗಿದ್ದಾರೆ ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಕಪ್ಪುಹಣವನ್ನು ಹೊರಗೆ ತರುವುದು ನೋಟು ರದ್ದತಿಯ ಉದ್ದೇಶವಾಗಿತ್ತು, ಆದರೆ ಅದು ಸಂಪೂರ್ಣವಾಗಿ ವಿಫಲಗೊಂಡಿದೆ. ಕಪ್ಪುಹಣವಿದ್ದವರು ಅದನ್ನು ಬಿಳಿ ಮಾಡಿಕೊಳ್ಳುವ ದಾರಿಗಳನ್ನು ಕಂಡುಕೊಂಡಿದ್ದಾರೆ. ದೇಶಾದ್ಯಂತ ಇತ್ತೀಚಿಗೆ ಬೃಹತ್ ಪ್ರಮಾಣದಲ್ಲಿ ನೋಟುಗಳನ್ನು ವಶಪಡಿಸಿಕೊಂಡಿರುವುದು ಕಪ್ಪುಹಣ ಮತ್ತೆ ಮರಳಿ ಬಂದಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದ ಅವರು, ನಗದು ರಹಿತ ವ್ಯವಹಾರ ಮಾತ್ರ ಕಪ್ಪುಹಣ ತಡೆಗೆ ಉಳಿದಿರುವ ಮಾರ್ಗವಾಗಿದೆ. ಆದರೆ ನಮ್ಮಂತಹ ದೇಶದಲ್ಲಿ ಅದು ಸಾಧ್ಯವಿಲ್ಲ. ಆರ್ಥಿಕತೆಯಲ್ಲಿ ಸ್ವಲ್ಪವೇ ನಗದು ಇದ್ದರೂ ಕಪ್ಪುಹಣವಂತೂ ಸದಾ ಇರುತ್ತದೆ ಎಂದರು.

ಮೋದಿಯವರು ಪ್ರತಿಪಾದಿಸುತ್ತಿರುವ ನಗದುರಹಿತ ಭಾರತ ಸಾಧ್ಯವೇ ಇಲ್ಲ ಮತ್ತು ಅದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ರಾಯ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News