×
Ad

ಬುರ್ಖಾ ತೆಗೆಯಬೇಕೆಂಬ ಆದೇಶ ನಿರಾಕರಿಸಿ ಕೆಲಸಕ್ಕೆ ರಾಜೀನಾಮೆ ನೀಡಿದ ಶಿಕ್ಷಕಿ

Update: 2016-12-10 23:38 IST

ಮುಂಬೈ, ಡಿ.10: ತರಗತಿಯಲ್ಲಿ ಬುರ್ಖಾ ಮತ್ತು ಹಿಜಾಬ್ ಧರಿಸಬಾರದು ಎಂಬ ಆದೇಶವು ತನ್ನ ಧಾರ್ಮಿಕ ಭಾವನೆಗೆ ಘಾಸಿ ಮಾಡುವ ಕಾರಣ ತಾನು ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಶಿಕ್ಷಕಿಯೊಬ್ಬರು ಹೇಳಿದ್ದಾರೆ. ಹೊಸದಾಗಿ ಕೆಲಸಕ್ಕೆ ನಿಯುಕ್ತಿಗೊಂಡಿರುವ ಹಿರಿಯ ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಬುರ್ಖಾ ಮತ್ತು ಹಿಜಾಬ್ ತೆಗೆಯಲು ಆದೇಶಿಸಿದ ಕಾರಣ ತಾನು ಮನನೊಂದು ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಶಬಿನಾ ಖಾನ್ ನಾಝ್‌ನೀನ್ ಎಂಬ ಶಿಕ್ಷಕಿ ತಿಳಿಸಿದ್ದಾರೆ. ಶಾಲೆಯಲ್ಲಿರುವ ಇತರ ಶಿಕ್ಷಕರು ಬುರ್ಖಾ ಮತ್ತು ಹಿಜಾಬ್ ತೆಗೆದಿರಿಸಲು ಒಪ್ಪಿದ್ದರು. ಆದರೆ ತಾನು ಒಪ್ಪಿರಲಿಲ್ಲ ಎಂದಿದ್ದಾರೆ. ಉಪನಗರ ಕುರ್ಲಾದಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಶಬಿನಾ ಖಾನ್ ಮಾಹಿತಿ ಸಂಪರ್ಕ ತಂತ್ರಜ್ಞಾನ ವಿಷಯದ ಶಿಕ್ಷಕಿಯಾಗಿದ್ದರು. ಬುರ್ಖಾ ತೆಗೆಯಲು ಸೂಚಿಸಿರುವ ವಿಷಯದ ಬಗ್ಗೆ ಈಕೆ ಶಾಲೆಯ ಪ್ರಾಂಶುಪಾಲರಿಗೆ ದೂರು ಸಲ್ಲಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ನಿರ್ಧರಿಸಿದ್ದರು. ರಾಜೀನಾಮೆಯನ್ನು ಸ್ವೀಕರಿಸದಿರಲು ಶಾಲೆಯ ಆಡಳಿತ ಮಂಡಳಿ ತೀರ್ಮಾನಿಸಿದೆ. ಮಧ್ಯೆ ಶಬೀನಾ ಅವರು ಎನ್‌ಜಿಒ ಸಂಸ್ಥೆಯಾಗಿರುವ ಜೈ ಹೋ ಪ್ರತಿಷ್ಠಾನವನ್ನು ಸಂಪರ್ಕಿಸಿದ್ದು ಪ್ರತಿಷ್ಠಾನವು ರಾಜ್ಯದ ಶಿಕ್ಷಣ ಸಚಿವ ವಿನೋದ್ ಟಾವಡೆಯವರಿಗೆ ಪತ್ರವೊಂದನ್ನು ಬರೆದಿದ್ದು, ತಕ್ಷಣ ನ್ಯಾಯ ಒದಗಿಸುವಂತೆ ಕೋರಿದೆ. ಮೂಲಭೂತ ಹಕ್ಕಾಗಿರುವ ಧಾರ್ಮಿಕ ಹಕ್ಕು ಆಚರಣೆಯನ್ನು ನಿರಾಕರಿಸಿರುವ ಪ್ರಕರಣ ಇದಾಗಿದೆ. ಸೂಕ್ತ ಕ್ರಮ ಕೈಗೊಂಡು ಶಬೀನಾರಿಗೆ ನ್ಯಾಯ ಒದಗಿಸುವಂತೆ ಸಚಿವರನ್ನು ಕೇಳಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಟ್ರಸ್ಟೀ ಆದಿಲ್ ಖಾತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News