×
Ad

ಇಂಡೊನೇಶ್ಯ ಭೂಕಂಪದಿಂದ 43 ಸಾವಿರ ಮಂದಿ ನಿರ್ವಸಿತರು

Update: 2016-12-11 00:08 IST

 ಜಕಾರ್ತ,ಡಿ.10: ಇಂಡೊನೇಶ್ಯದ ಅಸೆಹ್ ಪ್ರಾಂತದಲ್ಲಿ ಬುಧವಾರ ಸಂಭವಿಸಿದ್ದ ಪ್ರಬಲ ಭೂಕಂಪದಿಂದಾಗಿ ಕನಿಷ್ಠ 43 ಸಾವಿರ ಮಂದಿ ನಿರ್ವಸಿತರಾಗಿದ್ದಾರೆಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಭೂಕಂಪದಿಂದ ಜರ್ಜರಿತವಾಗಿರುವ ಅಸೆಹ್ ಪ್ರಾಂತದ ಮೂರು ಜಿಲ್ಲೆಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿರುವಂತೆಯೇ, ಮನೆಮಾರು ಕಳೆದುಕೊಂಡವರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗಿದೆ.

  ಬುಧವಾರ ಅಸೆಹ್ ಪ್ರಾಂತದಲ್ಲಿ ಸಂಭವಿಸಿದ 6.5 ರಿಕ್ಟರ್ ಮಾಪಕ ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದರು ಹಾಗೂ 11 ಸಾವಿರಕ್ಕೂ ಅಧಿಕ ಮನೆಗಳು ಮತ್ತು ಕಟ್ಟಡಗಳು ಕುಸಿದುಬಿದ್ದಿವೆ. ಈ ಭೀಕರ ನೈಸರ್ಗಿಕ ದುರಂತದಲ್ಲಿ ಮನೆಮಾರುಕಳೆದುಕೊಂಡವರು ತಾತ್ಕಾಲಿಕ ಶಿಬಿರಗಳಲ್ಲಿ ಹಾಗೂ ಮಸೀದಿಗಳಲ್ಲಿ ಆಶ್ರಯ ಪಡೆದುಕೊಂಡಿದ್ದರೆ, ಕೆಲವರು ಬಂಧುಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ.

 ಭೂಕಂಪದ ಬಳಿಕ ಸಂಪೂರ್ಣವಾಗಿ ನಾಮಾವಶೇಷವಾಗಿರುವ ಮೆಯುರೆಡು ಪಟ್ಟಣದಲ್ಲಿ ಕುಸಿದ ಕಟ್ಟಡಗಳ ಭಗ್ನಾವಶೇಷಗಳಡಿಯಲ್ಲಿ ಬದುಕುಳಿದಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಕರ್ತರು ಪೊಲೀಸ್ ಶ್ವಾನಗಳ ನೆರವನ್ನು ಪಡೆದುಕೊಂಡಿದ್ದಾರೆ. ಭೂಕಂಪದ ಬಳಿಕ ಸ್ಮಶಾನಸದೃಶವಾಗಿರುವ ಪಿಡಿಜಯಾ ನಗರದಲ್ಲಿ ಹಾಗೂ ಇತರ ನಾಲ್ಕು ಕಡೆಗಳಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News