×
Ad

ಸೂತಕದ ಮನೆಯಲ್ಲಿ ಅಧಿಕಾರಕ್ಕೆ ಮಸಲತ್ತು

Update: 2016-12-11 09:20 IST

ಚೆನ್ನೈ, ಡಿ.11: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ಆವರಿಸಿದ್ದ ಸೂತಕದ ಛಾಯೆ ಮಾಯವಾಗುವ ಮುನ್ನವೇ ಅವರ ಅಧಿಕೃತ ನಿವಾಸವಾಗಿದ್ದ ಪೊಯೆಸ್ ಗಾರ್ಡನ್‌ನಲ್ಲಿ ಅಧಿಕಾರಕ್ಕೆ ಸಂಚು ನಡೆಯುತ್ತಿದೆ. ಜಯಾ ಉತ್ತರಾಧಿಕಾರಿ ಎನಿಸಿಕೊಂಡ ಶಶಿಕಲಾ ಮನೆಯಲ್ಲೇ ಮೂರು ಬಣಗಳು ಅಧಿಕಾರಕ್ಕೆ ಪೈಪೋಟಿ ನಡೆಸಿರುವುದು ಬೆಳಕಿಗೆ ಬಂದಿದೆ.

ಬಹುತೇಕ ಎಐಎಡಿಎಂಕೆ ಸದಸ್ಯರು ಶಶಿಕಲಾ ಅವರ ಬೆಂಬಲಕ್ಕೆ ನಿಂತಿದ್ದರೆ, ಇನ್ನೊಂದು ಬಣದ ನೇತೃತ್ವವನ್ನು ಅವರ ಅಳಿಯ ಹಾಗೂ ರಾಜ್ಯಸಭಾ ಸದಸ್ಯ ಟಿ.ಟಿ.ವಿ.ದಿನಕರನ್ ವಹಿಸಿದ್ದಾರೆ. ಮೂರನೇ ಬಣದ ಮುಖಂಡ ಶಶಿಕಲಾ ಅವರ ಸಹೋದರ ವಿ.ದಿವಾಕರನ್.

ಕುಟುಂಬದ ಇನ್ನೂ ಕನಿಷ್ಠ ಹತ್ತು ಮಂದಿ ಅಧಿಕಾರ ಪಡೆಯುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಮುಂದಾಗಿದ್ದಾರೆ. ಶಶಿಕಲಾ ಅವರ ಮಾಜಿ ಪತಿ ಎಂ.ನಟರಾಜನ್ ಕೂಡಾ ಪೊಯೆಸ್ ಗಾರ್ಡನ್‌ಗೆ ಪ್ರವೇಶ ಪಡೆಯಲು ಕಸರತ್ತು ನಡೆಸಿದ್ದಾರೆ.

ಆದರೆ ಶಶಿಕಲಾ ಕೆಲವರ ಮಾತನ್ನಷ್ಟೇ ಕೇಳುತ್ತಿದ್ದು, ಇವರಲ್ಲಿ ದಿವಾಕರನ್ ಹಾಗೂ ನಟರಾಜನ್ ಸೇರಿದ್ದಾರೆ. 60ರ ಆಸುಪಾಸಿನಲ್ಲಿರುವ ನಟರಾಜನ್ ತಮ್ಮ ಪ್ರವೇಶಕ್ಕೆ ಪ್ರಬಲ ವೇದಿಕೆ ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಪ್ರಮುಖ ಆಯಕಟ್ಟಿನ ಹುದ್ದೆಗಳಿಗೆ ತಮಗೆ ಬೇಕಾದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಲು ಮುಂದಾಗಿದ್ದಾರೆ. ಶಶಿಕಲಾ ಜತೆಗಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನಟರಾಜನ್, ಕುಟುಂಬದ ಇತರ ಸದಸ್ಯರ ಮೂಲಕ ಹಾಗೂ ಬಿಜೆಪಿ ಮುಖಂಡರ ಮೂಲಕ ಶಶಿಕಲಾ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News