ಸಮಾಜದ ಮನಸ್ಸನ್ನು ರೂಪಿಸುವ ಕೆಲಸ ರಂಗಭೂಮಿಯಿಂದಾಗಲಿ: ವೈದೇಹಿ

Update: 2016-12-11 18:36 GMT

ಉಡುಪಿ, ಡಿ.11: ಸಮಾಜದ ಮನಸ್ಸನ್ನು ರೂಪಿಸುವ, ಗುರುತಿಸುವ ಹಾಗೂ ಎತ್ತಿ ತೋರಿಸುವ ಕೆಲಸವನ್ನು ರಂಗಭೂಮಿ ಮಾಡಬೇಕು. ರಂಗಭೂಮಿಯಿಂದಾಗಿ ಕನ್ನಡ ಭಾಷೆಯ ವಿವಿಧ ಪ್ರಕಾರಗಳು (ಕುಂದಾಪ್ರ ಕನ್ನಡ, ಧಾರವಾಡ ಕನ್ನಡ ಇತ್ಯಾದಿ) ಉಳಿಯಲು ಸಾಧ್ಯವಾಗಿದೆ ಎಂದು ಖ್ಯಾತ ಸಾಹಿತಿ ವೈದೇಹಿ ಹೇಳಿದ್ದಾರೆ.

ಉಡುಪಿಯ ಸಾಂಸ್ಕೃತಿಕ ಸಂಘಟನೆ ರಂಗಭೂಮಿಯ ಸುವರ್ಣ ರಂಗಭೂಮಿ ಸಂಭ್ರಮದ ಸಮಾರೋಪ ಸಮಾರಂಭದ ಎರಡನೆ ದಿನದಂದು ಸಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹೆಣ್ಣಿನ ಕುರಿತಂತೆ ರಂಗಭೂಮಿಯಲ್ಲಿ ಅದರಲ್ಲೂ ಕಂಪೆನಿ ನಾಟಕಗಳಲ್ಲಿ ತಾರತಮ್ಯ ಸಾಕಷ್ಟಿದೆ. ಇದನ್ನು ಪ್ರತಿರೋಧಿಸಿ ನಾಗರತ್ನಮ್ಮ ನಂಥವರು ಸ್ತ್ರೀ ನಾಟಕ ಮಂಡಳಿಯನ್ನು ಕಟ್ಟಿದ್ದರು. ಈಗಲೂ ನಟಿಯೊಬ್ಬಳ ಹೆಣ್ತನವನ್ನು ನೆನಪಿಟ್ಟುಕೊಂಡು ಆಕೆಯೊಳಗಿನ ಕಲಾವಿದೆಯನ್ನು ಗುರುತಿಸುವಂತಾಗಬೇಕು ಎಂದವರು ನುಡಿದರು.

ಕನ್ನಡದಲ್ಲಿ ಮಹಿಳಾ ನಾಟಕ ರಚನೆಗಾರರ ಸಂಖ್ಯೆ ವಿರಳವಾಗಿದೆ. ನಾನೂ ಸಹ ಸಾಕಷ್ಟು ನಾಟಕ ಬರೆಯದ ಬಗ್ಗೆ ನನಗೂ ಅತೃಪ್ತಿ ಇದೆ. ನಮ್ಮಲ್ಲೂ ಎಲ್ಲೋ ಒಂದು ಕಡೆ ಸೆನ್ಸಾರ್ ಆಗುವ ಗುಮಾನಿ ನನಗಿದೆ. ಮಹಿಳೆಯರು ಚಿತ್ರಿಸಿದ ಸ್ತ್ರೀ ಪಾತ್ರಗಳಲ್ಲಿ ಮಾತ್ರ ಮಹಿಳೆಯರ ಸರಿಯಾದ ಅಭಿವ್ಯಕ್ತಿ ಸಾಧ್ಯವಾಗಬಹುದು ಎಂದವರು ನುಡಿದರು.

ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಬಸವಲಿಂಗಯ್ಯ ಮಾತನಾಡಿ, ವಿಶ್ವದ ಪ್ರಮುಖ ನಾಟಕಕಾರರೆಲ್ಲರೂ ಮಹಿಳೆಯರನ್ನೇ ಪ್ರಧಾನವಾಗಿಟ್ಟುಕೊಂಡು ನಾಟಕ ಬರೆದಿದ್ದಾರೆ. ವಿಶ್ವರಂಗಭೂಮಿಯಲ್ಲಿ ಮಹಿಳೆ ಬಹುಮುಖ್ಯಳಾಗಿದ್ದರೂ ಪುರುಷರ ಮೂಲಕವೇ ಬಂದಿದ್ದಾಳೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡಮಿಯ ಸದಸ್ಯ ಉಮೇಶ್ ಎಂ.ಸಾಲ್ಯಾನ್, ರಂಗಭೂಮಿಯ ಕಾರ್ಯಾಧ್ಯಕ್ಷರಾದ ಯು.ಉಪೇಂದ್ರ, ಡಾ.ಅರವಿಂದ ನಾಯಕ್ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು.

ರಂಗಭೂಮಿಯ ಉಪಾಧ್ಯಕ್ಷ ಪಿ.ವಾಸುದೇವ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ನಟಿ ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ರಂಗ ಸಂಗೀತ ನಿರ್ದೇಶಕ ಗೀತಂ ಗಿರೀಶ್ ಮತ್ತು ಬಳಗದವರು ರಂಗಗೀತೆಗಳನ್ನು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News