‘ರಂಗ ಸುರಭಿ’ ರಾಜ್ಯಮಟ್ಟದ ನಾಟಕ ಸಪ್ತಾಹ ಉದ್ಘಾಟನೆ

Update: 2016-12-13 18:17 GMT

ಬೈಂದೂರು, ಡಿ.13: ನಾಟಕ, ಸಂಗೀತ, ಕಲೆಗಳು ಮನುಷ್ಯನ ಮನೋ ನೆಲೆಯ ಸೆಲೆಗಳಾಗಿವೆ. ಬದುಕಿನ ಅವಕಾಶಗಳನ್ನು ಅರಸಿ ಎಲ್ಲಿಯೋ ನೆಲೆ ಕಾಣಲು ಹೊರಟರೂ ಅಂತಿಮವಾಗಿ ಕಲೆ ಮನುಷ್ಯನ ಕೈಹಿಡಿದು ನಡೆಸುತ್ತದೆ ಎಂದು ಸಾಹಿತಿ ವೈದೇಹಿ ಹೇಳಿದ್ದಾರೆ.

ಸುರಭಿ ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಬೈಂದೂರು ಶ್ರೀಶಾರದಾ ವೇದಿಕೆಯಲ್ಲಿ ಸೋಮವಾರ ಆಯೋಜಿಸಲಾದ ‘ರಂಗ ಸುರಭಿ’ ರಾಜ್ಯಮಟ್ಟದ ನಾಟಕ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸುರಭಿಯ ಗೌರವಾಧ್ಯಕ್ಷ, ಸಾಹಿತಿ ಯು.ಚಂದ್ರ ಶೇಖರ ಹೊಳ್ಳ ಸುರಭಿ ಕಲಾಗ್ರಾಮ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ಘೋಷಿಸಿದರು. ಈ ಸಂದರ್ಭ ರಂಗ ನಿರ್ದೇಶಕ ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಪಂ ಸದಸ್ಯ ಶಂಕರ ಪೂಜಾರಿ, ಯಡ್ತರೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ, ಬೈಂದೂರು ಶ್ರೀಸೇನೇಶ್ವರ ದೇವಳದ ಆಡಳಿತ ಧರ್ಮದರ್ಶಿ ಚೆನ್ನಕೇಶವ ಉಪಾಧ್ಯಾಯ, ಸುರಭಿ ಅಧ್ಯಕ್ಷ ಶಿವರಾಮ ಕೊಠಾರಿ ಯಡ್ತರೆ, ಯಸ್ಕೋರ್ಡ್ ಟ್ರಸ್ಟ್‌ನ ಕೃಷ್ಣಮೂರ್ತಿ ಉಡುಪ ಕಬ್ಸೆ ಮತ್ತಿತರರು ಉಪಸ್ಥಿತರಿದ್ದರು.

ಸುರಭಿಯ ನಿರ್ದೇಶಕ ಸುಧಾಕರ ಪಿ.ಬೈಂದೂರು ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ್ ವೈ. ಕೊರಗ ವಂದಿಸಿದರು. ಶಿಕ್ಷಣ ರಾಘವೇಂದ್ರ ದಡ್ಡು ಹಾಗೂ ನಿಶ್ಚಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News