ದೈಹಿಕ ನ್ಯೂನತೆ ಬಗ್ಗೆ ಲೇವಡಿಗೆ ಈಕೆಯ ದಿಟ್ಟ ತಿರುಗೇಟು
ವಾಷಿಂಗ್ಟನ್, ಡಿ.14: ತೀವ್ರವಾದ ದೈಹಿಕ ನ್ಯೂನತೆಯಿದ ಬಳಲುತ್ತಿರವ ಮಹಿಳೆಯೊಬ್ಬಳ ಮುಖಚರ್ಯೆಯನ್ನು ಲೇವಡಿ ಮಾಡುವ ಮೆಮೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಡಿಕೊಂಡ ಪರಿಣಾಮ ಅತೀವವಾಗಿ ನೊಂದ ಲಿಝಿ ವೆಲಸ್ಕ್ವರ್ ಎಂಬ ಹೆಸರಿನ ಆ ಮಹಿಳೆ ಅದೇ ಸಮಯ ತನ್ನನ್ನು ಲೇವಡಿ ಮಾಡುವವರಿಗೆ ದಿಟ್ಟ ತಿರುಗೇಟು ನೀಡಿದ್ದು ಆಕೆಯ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ.
ಸ್ಫೂರ್ತಿದಾಯಕ ಭಾಷಣಕರ್ತೆಯಾಗಿರುವ ಲಿಝೀಗೆ ಸಾವಿರಾರು ಫಾಲೋವರ್ಸ್ ಇದ್ದು ಆಕೆ ಅತೀ ವಿರಳವಾದ ಅರೋಗ್ಯ ಸಮಸ್ಯೆಯೊಂದರಿಂದ ಬಳಲುತ್ತಿದ್ದಾಳೆ. ಆಕೆಯ ದೇಹದಲ್ಲಿ ಕೊಬ್ಬಿನಂಶ ಶೇಖರಣೆಯೇ ಆಗದಿರುವುದರಿಂದ ಆಕೆಯ ಮುಖ ಹಾಗೂ ದೇಹ ತೀರಾ ಕೃಶವಾಗಿರುವುದು ಗೋಚರಿಸುತ್ತದೆ. ತನ್ನನ್ನು ಲೇವಡಿ ಮಾಡಿದವರಿಗೆ ಆಕೆ ಇನ್‌ಸ್ಟಾಗ್ರಾಮ್ ನಲ್ಲಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
‘‘ಒಬ್ಬಳು ಸಂತ್ರಸ್ತೆಯಾಗಿ ನಾನು ಇದನ್ನು ಬರೆಯುತ್ತಿಲ್ಲ. ಬದಲಾಗಿ ದನಿಯನ್ನು ಬಳಸುವವಳಾಗಿ ನಾನು ಇದನ್ನು ಬರೆಯುತ್ತಿದ್ದೇನೆ. ನಾವು ಹೇಗೆ ಕಾಣುತ್ತೇವೆ ಅಥವಾ ನಮ್ಮಗಾತ್ರ ಇಲ್ಲಿ ಅಪ್ರಸ್ತುತ. ದಿನದ ಕೊನೆಗೆ ನಾವೆಲ್ಲರೂ ಮನುಷ್ಯರೇ,’’ ಎಂದು ಆಕೆ ಬರೆದಿದ್ದಾರೆ. ‘‘ಮುಂದಿನ ಬಾರಿ ಯಾರೋ ಅಪರಿಚಿತರ ಬಗ್ಗೆ ಮೆಮೆಯೊಂದನ್ನು ನೀವು ಕಂಡಾಗ ಇಲ್ಲಿ ಬರೆದಿರುವುದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೀರಿ ಎಂದು ನಾನಂದುಕೊಳ್ಳುತ್ತೇನೆ. ನಿಮಗೆ ಅದು ತಮಾಷೆಯೆನಿಸಿದರೂ ಆ ಚಿತ್ರದಲ್ಲಿರುವವರಿಗೆ ಅದು ತೀರಾ ನೋವಿನ ಸಂಗತಿ. ಪ್ರೀತಿಯನ್ನು ಹರಡಿ, ನೋವುಂಟು ಮಾಡುವ ಶಬ್ದಗಳನ್ನಲ್ಲ,’’ ಎಂದೂ ಲಿಝಿ ಹೇಳಿದ್ದಾರೆ.
ಲಿಝಿ ಇನ್ನೊಂದು ಗಂಭೀರ ಸಮಸ್ಯೆಯೆದುರಿಸುತ್ತಿದ್ದಾರೆ. ಅದೇನೆಂದರೆ ಮರ್ಫನ್ ಸಿಂಡ್ರೋಮ್. ಈ ಸಮಸ್ಯೆಯಿರುವವರ ಕೈಕಾಲುಗಳ ಹಾಗೂ ದೇಹದರೂಪ ಭಿನ್ನವಾಗಿರುವುದು.
ಆಕೆಯ ಪೋಸ್ಟನ್ನು ಇಲ್ಲಿಯವರೆಗೆ ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸಾವಿರಾರು ಮಂದಿ ಶೇರ್ ಮಾಡಿದ್ದಾರೆ ಹಾಗೂ ಆಕೆಯನ್ನು ಪ್ರಶಂಸಿಸಿದ್ದಾರೆ ಕೂಡ.