ಮಗಳ ಮದುವೆ ದುಡ್ಡಿನಲ್ಲಿ 90 ಕುಟುಂಬಗಳಿಗೆ ಮನೆ ಕಟ್ಟಿಕೊಟ್ಟ ಪುಣ್ಯಾತ್ಮ

Update: 2016-12-14 15:38 GMT

ಔರಂಗಾಬಾದ್,ಡಿ.14: ಕರ್ನಾಟಕದ ಮಾಜಿ ಬಿಜೆಪಿ ಸಚಿವ ಹಾಗೂ ಗಣಿ ಉದ್ಯಮಿ ಗಾಲಿ ಜನಾರ್ಧನ ರೆಡ್ಡಿ ಅವರು ಇತ್ತೀಚಿಗೆ ನೂರಾರು ಕೋಟಿ ರೂ.ವೆಚ್ಚದಲ್ಲಿ ತನ್ನ ಪುತ್ರಿಯ ಮದುವೆಯನ್ನು ನಡೆಸಿ ಹುಚ್ಚು ಶ್ರೀಮಂತಿಕೆಯನ್ನು ಮೆರೆದಿದ್ದರೆ, ಇತ್ತ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಉದ್ಯಮಿ ಮನೋಜ್ ಮುನೋತ್ ವಸತಿಹೀನ ಬಡವರಿಗೆ 90 ಮನೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತನ್ನ ಮಗಳ ಮದುವೆಯನ್ನು ಉದಾತ್ತ ರೀತಿಯಲ್ಲಿ ನಡೆಸಲು ನಿರ್ಧರಿಸಿದ್ದಾರೆ.

 ಮುನೋತ್ ತನ್ನ ಮಗಳ ಮದುವೆಗೆ 70-80 ಲ.ರೂ.ಗಳನ್ನು ಖರ್ಚು ಮಾಡಲು ಮೊದಲು ನಿರ್ಧರಿಸಿದ್ದರು. ಆದರೆ ಇಷ್ಟೊಂದು ದೊಡ್ಡ ಮೊತ್ತವನ್ನು ಮಗಳ ಮದುವೆಗೆ ವ್ಯಯಿಸುವ ಬದಲು ಮಾನವೀಯ ಕಾರ್ಯಗಳಿಗೆ ಬಳಸುವಂತೆ ಬಿಜೆಪಿಯ ಯುವ ಶಾಸಕ ಪ್ರಶಾಂತ್ ಬಂಬ್ ಅವರು ಮುನೋತ್‌ರನ್ನು ಹುರಿದುಂಬಿಸಿದ್ದರು.

 ಮುನೋತ್‌ರ ಪುತ್ರಿ ಶ್ರೇಯಾ ತನ್ನ ತಂದೆಯ ನಿರ್ಧಾರವನ್ನು ಹೃತ್ಪೂರ್ವಕವಾಗಿ ಬೆಂಬಲಿಸಿದ್ದಾರೆ. ಅವರ ಈ ನಿರ್ಧಾರದಿಂದ ತನಗೆ ತುಂಬ ಸಂತಸವಾಗಿದೆ ಎಂದಿದ್ದಾರೆ. ತನ್ನ ತಂದೆಯ ಈ ಉದಾತ್ತ ನಿರ್ಧಾರ ತನ್ನ ಮದುವೆಗೆ ಅತ್ಯಂತ ದೊಡ್ಡ ಉಡುಗೊರೆ ಎಂದು ಭಾವಿಸಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಮುನೋತ್ ತಾನು ನಿರ್ಮಿಸಿರುವ ಮನೆಗಳಿಗೆ ಫಲಾನುಭವಿಗಳನ್ನೂ ಗುರುತಿಸಿದ್ದಾರೆ. ನೀರು ಮತ್ತು ವಿದ್ಯುತ್‌ನಂತಹ ಮೂಲಭೂತ ಅಗತ್ಯಗಳಿಗಾಗಿ ತಾನು ಮತ್ತು ತನ್ನ ಕುಟುಂಬ ಇನ್ನು ಮುಂದೆ ಪರದಾಡಬೇಕಿಲ್ಲ ಎಂದು ಫಲಾನುಭವಿಗಳಲ್ಲೋರ್ವರಾಗಿರುವ ಶಬ್ ಅಲಿ ಶೇಖ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News