ವಿಕಲಚೇತನರ ಹಕ್ಕು ಮಸೂದೆ ಅಂಗೀಕಾರ

Update: 2016-12-14 13:58 GMT

ಹೊಸದಿಲ್ಲಿ, ಡಿ.14: ವಿಕಲಚೇತನರ ಬಗ್ಗೆ ಪಕ್ಷಪಾತ ಮಾಡುವವರಿಗೆ ಗರಿಷ್ಠ 5 ಲಕ್ಷ ದಂಡ ಮತ್ತು ಎರಡು ವರ್ಷದ ಜೈಲುಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. 

ವಿಕಲಚೇತನರ ಹಕ್ಕು ಮತ್ತು ಅಧಿಕಾರವನ್ನು ಸುರಕ್ಷಿತಗೊಳಿಸುವ ಉದ್ದೇಶದ ವಿಕಲಚೇತನರ ಮಸೂದೆ 2014- ರಾಜ್ಯಸಭೆಯಲ್ಲಿಂದು ಧ್ವನಿಮತದ ಮೂಲಕ ಅಂಗೀಕರಿಸಲ್ಪಟ್ಟಿತು. ಈ ಮಹತ್ವದ ಮಸೂದೆಗೆ ಅಂಗೀಕಾರ ನೀಡುವ ಸಂದರ್ಭ ಆಡಳಿತ ಪಕ್ಷ ಮತ್ತು ವಿಪಕ್ಷಗಳು ತಮ್ಮೆಲ್ಲಾ ಭಿನ್ನಾಭಿಪ್ರಾಯ ಮರೆತು ಸರ್ವಾನುಮತದ ತೀರ್ಮಾನಕ್ಕೆ ಬಂದಿರುವುದು ಗಮನಾರ್ಹವಾಗಿದೆ.

ಸಾಮಾಜಿಕ ನ್ಯಾಯ ಸಚಿವ ಥಾವರ್‌ಚಂದ್ ಗೆಹ್ಲೋಟ್ ಅವರು ಈ ತಿಂಗಳ ಆರಂಭದಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದ್ದರು. ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಶೂನ್ಯವೇಳೆಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭ ವಿರೋಧ ಪಕ್ಷದ ನಾಯಕ ಗುಲಾಮ್‌ನಬಿ ಆಝಾದ್, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಸಿಪಿಐ(ಎಂ) ಮುಖಂಡ ಸೀತಾರಾಮ್ ಯೆಚೂರಿ, ಸಮಾಜವಾದಿ ಪಕ್ಷದ ಮುಖಂಡ ನರೇಶ್ ಅಗರ್‌ವಾಲ್ ಮಾತನಾಡಿ, ಈ ಮಹತ್ವದ ಮಸೂದೆಯನ್ನು ತಕ್ಷಣ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕುತ್ತರಿಸಿದ ಸಂಸದೀಯ ಸಚಿವಾಲಯದ ಉಪಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ತಕ್ಷಣ ಈ ವಿಷಯ ಕೈಗೆತ್ತಿಕೊಳ್ಳಬಹುದು ಎಂದರು. ಈ ಸಂದರ್ಭ ಮಾತನಾಡಿದ ಸದನದ ಉಪಾಧ್ಯಕ್ಷ ಪಿ.ಜೆ.ಕುರಿಯನ್, ಈ ವಿಷಯ ಮಧ್ಯಾಹ್ನದ ಬಳಿಕದ ಅಜೆಂಡಾದಲ್ಲಿದೆ ಎಂದು ಮೊದಲು ತಿಳಿಸಿದರೂ ವಿಷಯದ ಬಗ್ಗೆ ಕಿರುಚರ್ಚೆಗೆ ಒಪ್ಪಿಗೆ ನೀಡಿದರು.

120 ತಿದ್ದುಪಡಿಗಳುಳ್ಳ ಮಸೂದೆಯನ್ನು ಮಧ್ಯಾಹ್ನದ ಬಳಿಕ ಅಂಗೀಕರಿಸಲಾಯಿತು.
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News