ಉಗ್ರರು ಮತ್ತು ಅವರ ಕುಟುಂಬ ಒಂದೇ ಅಲ್ಲ:ಮೆಹಬೂಬ ಮುಫ್ತಿ

Update: 2016-12-14 15:24 GMT

ಹೊಸದಿಲ್ಲಿ,ಡಿ.14: ಉಗ್ರರು ಮತ್ತು ಅವರ ಕುಟುಂಬಗಳನ್ನು ಪ್ರತ್ಯೇಕವಾಗಿ ನೋಡಬೇಕು. ಅವರನ್ನು ಒಂದೇ ದೃಷ್ಟಿಯಿಂದ ಪರಿಗಣಿಸಬಾರದು ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಇಂದು ಹೇಳಿದರು.

ಖಾಲಿದ್ ಮುಝಫ್ಫರ್ ವಾನಿಯ ಕುಟುಂಬಕ್ಕೆ ಪರಿಹಾರ ನೀಡುವ ಸರಕಾರದ ನಿರ್ಧಾರವನ್ನು ರಾಜ್ಯದಲ್ಲಿ ಆಡಳಿತ ಮಿತ್ರಪಕ್ಷವಾಗಿರುವ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಖಂಡಿಸಿರುವ ಹಿನ್ನೆಲೆಯಲ್ಲಿ ಮುಫ್ತಿಯವರ ಈ ಹೇಳಿಕೆ ಹೊರಬಿದ್ದಿದೆ.

ಖಾಲಿದ್ ಜುಲೈ 8ರಂದು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಹಿಝ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಅಣ್ಣನಾಗಿದ್ದು, ಈತ 2015,ಎಪ್ರಿಲ್‌ನಲ್ಲಿ ಸೇನೆಯ ಗುಂಡಿಗೆ ಬಲಿಯಾಗಿದ್ದ.

ಖಾಲಿದ್ ಹಿಝ್ಬುಲ್‌ಗಾಗಿ ಕೆಲಸ ಮಾಡುತ್ತಿದ್ದ ಎಂದು ಸೇನೆಯು ಹೇಳಿದ್ದರೆ, ಆತ ಯಾವುದೇ ಭಯೋತ್ಪಾದಕ ದಾಳಿಯಲ್ಲಿ ಭಾಗವಹಿಸಿದ್ದ ಅಥವಾ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಯಾವುದೇ ಉಲ್ಲೇಖ ಪೊಲೀಸ್ ದಾಖಲೆಗಳಲ್ಲಿರಲಿಲ್ಲ. ಹೀಗಾಗಿ ಖಾಲಿದ್ ಹತ್ಯೆ ವಿವಾದವನ್ನು ಸೃಷ್ಟಿಸಿತ್ತು.

ಖಾಲಿದ್ ಉಗ್ರಗಾಮಿಯಾಗಿದ್ದ ಮತ್ತು ಆತನ ಕುಟುಂಬಕ್ಕೆ ಪರಿಹಾರ ನೀಡಲು ನಿಯಮಾವಳಿಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ಕೂಡ ಸರಕಾರದ ನಿರ್ಧಾರವನ್ನು ವಿರೋಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News