ಆಗಸ್ಟಾ ಹಗರಣ:ತ್ಯಾಗಿಯ ಸಿಬಿಐ ಕಸ್ಟಡಿ ವಿಸ್ತರಣೆ
Update: 2016-12-14 20:56 IST
ಹೊಸದಿಲ್ಲಿ,ಡಿ.14: ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ಬಂಧಿಸಲ್ಪಟಿರುವ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರ ಸಿಬಿಐ ಕಸ್ಟಡಿಯನ್ನು ಡಿ.17ರವರೆಗೆ ವಿಸ್ತರಿಸಿ ಇಲ್ಲಿಯ ವಿಶೇಷ ನ್ಯಾಯಾಲಯವು ಬುಧವಾರ ಆದೇಶಿಸಿದೆ.
ವಾಯುಪಡೆಗಾಗಿ ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ 450ಕೋ.ರೂ.ಗಳ ಲಂಚ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾಗಿರುವ ತ್ಯಾಗಿಯವರ ಸಂಬಂಧಿ ಸಂಜೀವ ತ್ಯಾಗಿ ಅಲಿಯಾಸ್ ಜ್ಯೂಲಿ ಮತ್ತು ವಕೀಲ ಗೌತಮ ಖೇತಾನ್ ಅವರ ಸಿಬಿಐ ಕಸ್ಟಡಿಯನ್ನೂ ವಿಷೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಡಿ.17ರವರೆಗೆ ವಿಸ್ತರಿಸಿದರು.
ರಾಷ್ಟ್ರದ ಹಿತಾಸಕ್ತಿಯು ಒಳಗೊಂಡಿರುವುದರಿಂದ ಈ ಬೃಹತ್ ಒಳಸಂಚನ್ನು ಬಯಲಿಗೆಳೆಯಲು ಆರೋಪಿಗಳನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಬೇಕಾಗಿರುವುದರಿಂದ ಅವರನ್ನು ಇನ್ನೂ ಏಳು ದಿನಗಳ ಕಾಲ ತನ್ನ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರಿಕೊಂಡಿತ್ತು.