ಸಿಂಧು ಶುಭಾರಂಭ

Update: 2016-12-14 18:25 GMT

ದುಬೈ, ಡಿ.14: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಪ್ರತಿಷ್ಠಿತ ಬಿಡಬ್ಲುಎಫ್ ಸೂಪರ್ ಸಿರೀಸ್ ಫೈನಲ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಬುಧವಾರ ಇಲ್ಲಿ ನಡೆದ ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಸಿಂಧು ದ್ವಿತೀಯ ಶ್ರೇಯಾಂಕಿತೆ ಜಪಾನ್‌ನ ಅಕಾನೆ ಯಮಗುಚಿ ಅವರನ್ನು 12-21, 21-8, 21-15 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

 ಮೊದಲ ಗೇಮ್‌ನ್ನು 12-21 ರಿಂದ ಸೋತಿರುವ ಸಿಂಧು ಹಿನ್ನಡೆ ಕಂಡಿದ್ದರು. ಎರಡನೆ ಗೇಮ್‌ನ್ನು 21-8 ಅಂತರದಿಂದ ಜಯಿಸಿದ ಸಿಂಧು ಪ್ರತಿ ಹೋರಾಟ ನೀಡಿ ಪಂದ್ಯವನ್ನು ಸಮಬಲಗೊಳಿಸಿದರು. ಮೂರನೆ ಗೇಮ್‌ನಲ್ಲಿ ಇಬ್ಬರೂ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಅಂತಿಮವಾಗಿ ಭಾರೀ ಮುನ್ನಡೆ ಸಾಧಿಸಿದ ಸಿಂಧು 21-15 ರಿಂದ ಮೂರನೆ ಗೇಮ್‌ನ್ನು ಗೆದ್ದುಕೊಂಡರು.

ಸಿಂಧು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಒಲಿಂಪಿಕ್ಸ್ ಚಾಂಪಿಯನ್ ಕ್ಯಾರೊಲಿನಾ ಮರಿನ್ ಹಾಗೂ ಚೀನಾದ ಸನ್ ಯೂ ಅವರಿದ್ದಾರೆ. ಅಗ್ರ ಎರಡು ಸ್ಥಾನ ಪಡೆಯುವ ಆಟಗಾರ್ತಿಯರು ಸೆಮಿ ಫೈನಲ್‌ಗೆ ಪ್ರವೇಶಿಸಲಿದ್ದಾರೆ. ಪ್ರಸ್ತುತ ಸರಣಿಯಲ್ಲಿ ವಿಶ್ವದ ಅಗ್ರ-8 ಆಟಗಾರ್ತಿಯರು ಭಾಗವಹಿಸುತ್ತಿದ್ದಾರೆ. ನಾಲ್ವರು ಆಟಗಾರ್ತಿಯರು ಇರುವ ಎರಡು ಗುಂಪು ರಚಿಸಲಾಗಿದೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಆಟಗಾರ್ತಿಯಾಗಿರುವ ಸಿಂಧು ಮುಂದಿನ ಸುತ್ತಿನಲ್ಲಿ ಚೀನಾದ ಸನ್ ಯೂ ಅವರನ್ನು ಎದುರಿಸಲಿದ್ದಾರೆ.

ಸಿಂಧು ಪ್ರತಿಷ್ಠಿತ ಬಿಡಬ್ಲುಎಫ್ ಸೂಪರ್ ಸಿರೀಸ್ ಫೈನಲ್ಸ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News